ಬೆಂಗಳೂರು: ಸಾರ್ವಜನಿಕ, ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳ ಕಾರ್ಯಚಟುವಟಿಕೆಗೆ ಅನುಮತಿ ಕಡ್ಡಾಯ ಸಂಬಂಧ ಪ್ರತ್ಯೇಕ ಮಸೂದೆ ರೂಪಿಸಿರುವ ರಾಜ್ಯ ಸರ್ಕಾರ ಇದೇ ಅಧಿವೇಶನದಲ್ಲಿ ಮಸೂದೆ ಮಂಡನೆಗೆ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಕಳೆದ ಅಕ್ಟೋಬರ್ 18ಕ್ಕೆ ಈ ಸಂಬಂಧ ಗೃಹ ಇಲಾಖೆ ಆದೇಶ ಹೊರಡಿಸಿತ್ತು. ಆದರೆ, ಈ ಆದೇಶದ ವಿರುದ್ಧ RSS ಧಾರವಾಡ ಪೀಠದಲ್ಲಿ ಅರ್ಜಿ ಸಲ್ಲಿಸಿ, ಮಧ್ಯಂತರ ತಡೆಯಾಜ್ಞೆ ತಂದಿತ್ತು. ಆ ಆದೇಶ ಹಿಂಪಡೆದು ಇದೀಗ ರಾಜ್ಯ ಸರ್ಕಾರ ಈ ಸಂಬಂಧ ಮಸೂದೆ ತರಲು ತೀರ್ಮಾನಿಸಿದೆ. ಆ ಮೂಲಕ ನಿಯಮಗಳಿಗೆ ಕಾನೂನು ಬಲ ನೀಡಲು ಮುಂದಾಗಿದೆ. ಮಸೂದೆ ಮೂಲಕ ಸಾರ್ವಜನಿಕ, ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳ ಕಾರ್ಯಚಟುವಟಿಕೆಗೆ ಅನುಮತಿ ಕಡ್ಡಾಯ ಗೊಳಿಸುವ, ನಿರ್ಬಂಧಿಸುವ ಅಂಶಗಳ ಸೇರ್ಪಡೆ ಆಗಲಿವೆ.
ಸರ್ಕಾರಿ ಜಮೀನು, ಆಟದ ಮೈದಾನ, ಉದ್ಯಾನಗಳು, ಸಮುದಾಯ ಭವನ ಮತ್ತು ರಸ್ತೆಗಳನ್ನು ಖಾಸಗಿ ಸಂಸ್ಥೆಗಳು, ಸಂಘ-ಸಂಸ್ಥೆಗಳು ಮತ್ತು ಗುಂಪುಗಳು ಯಾವುದೇ ಪೂರ್ವಾನುಮತಿ ಪಡೆಯದೇ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡದೇ ತಮ್ಮ ಚಟುವಟಿಕೆ, ಕಾರ್ಯಕ್ರಮ ಹಾಗೂ ಸಭೆ-ಸಮಾರಂಭ ನಡೆಸುವುದನ್ನು ನಿಯಂತ್ರಿಸುವ ಮಸೂದೆ ಇದಾಗಿದೆ.
ಸರ್ಕಾರಿ ಆಸ್ತಿಯನ್ನು ಅನಧಿಕೃತವಾಗಿ ಬಳಸುವುದು ಅತಿಕ್ರಮಣಕ್ಕೆ ಸಮನಾಗಿದ್ದು, ಸಾರ್ವಜನಿಕ ಉದ್ದೇಶದ ಬಳಕೆಗೆ ಅಡಚಣೆ ಉಂಟುಮಾಡುವುದಲ್ಲದೆ, ಸಾರ್ವಜನಿಕ ಸುರಕ್ಷತೆ, ಶಾಂತಿ ಮತ್ತು ಸುವ್ಯವಸ್ಥೆಗೆ ತೀವ್ರ ಭಂಗ ತರುವ ಸಾಧ್ಯತೆ ಇದೆ. ಸರ್ಕಾರಿ ಭೂಮಿ, ಕಟ್ಟಡಗಳು, ಆಟದ ಮೈದಾನಗಳು, ಉದ್ಯಾನವನಗಳು ಹಾಗೂ ಇತರ ಸಾರ್ವಜನಿಕ ಆಸ್ತಿಗಳನ್ನು ಖಾಸಗಿ ತರಗತಿಗಳು, ತರಬೇತಿ ಶಿಬಿರಗಳು, ವಾಣಿಜ್ಯ ಚಟುವಟಿಕೆಗಳು ಮತ್ತು ಇತರ ಕಾರ್ಯಕ್ರಮಗಳನ್ನು ನಡೆಸಲು ಸೂಕ್ತ ಅನುಮತಿಯಿಲ್ಲದೆ ಬಳಸಿಕೊಳ್ಳುವುದನ್ನು ಖಾಸಗಿ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಂಘಟನೆಗಳಿಗೆ ನಿಷೇಧಿಸಲಾಗುವುದು.
ವಿವಿಧ ಪ್ರಾಧಿಕಾರಗಳು ಪರಸ್ಪರ ವಿರೋಧಾತ್ಮಕ ಸುತ್ತೋಲೆ ಹೊರಡಿಸಿರುವುದನ್ನು ಗಮನಿಸಿ, ಸರ್ಕಾರಿ ಆಸ್ತಿ ಹಾಗೂ ಸ್ಥಳೀಯ ಸಂಸ್ಥೆಗಳು ಅಥವಾ ಇತರ ಪ್ರಾಧಿಕಾರಗಳ ಸ್ವತ್ತುಗಳನ್ನು ರಕ್ಷಿಸಲು ಮತ್ತು ಇಡೀ ಕರ್ನಾಟಕ ರಾಜ್ಯಾದ್ಯಂತ ಇಂತಹ ಆಸ್ತಿಗಳ ಬಳಕೆಗೆ ಸಂಬಂಧಿಸಿ ಏಕರೂಪದ ನಿಯಮ ಹಾಗೂ ವಿಧಾನಗಳನ್ನು ಕ್ರೋಢೀಕರಿಸಿ ಜಾರಿಗೆ ತರುವ ಉದ್ದೇಶದಿಂದ ಮಸೂದೆ ತರಲಾಗುತ್ತಿದೆ.
ಯಾರಿಗೆ ಈ ನಿಯಮ ಅನ್ವಯ?: ಸಂಸ್ಥೆಗಳು ಎಂದರೆ ಸರ್ಕಾರಿ ಇಲಾಖೆ ಅಥವಾ ಸರ್ಕಾರದ ಪ್ರಾಧಿಕಾರವನ್ನು ಹೊರತುಪಡಿಸಿ, ನೋಂದಾಯಿತ ಅಥವಾ ನೋಂದಾಯಿತವಲ್ಲದ ಯಾವುದೇ ಖಾಸಗಿ ಸಂಘ, ಸೊಸೈಟಿ, ಟ್ರಸ್ಟ್, ಕ್ಲಬ್, ವ್ಯಕ್ತಿಗಳ ಸಮೂಹ ಅಥವಾ ಇನ್ನಿತರ ಯಾವುದೇ ಸಂಸ್ಥೆಗಳಾಗಿವೆ.

