ಉಪಯುಕ್ತ ಸುದ್ದಿ

ಇ-ಸ್ವತ್ತು ಸೇರಿ ಸೇವೆ, ಕಾಮಗಾರಿ ಕುರಿತ ದೂರು ದಾಖಲಿಸಲು ಆನ್ ಲೈನ್ ವ್ಯವಸ್ಥೆ

Share It

ಇ-ಸ್ವತ್ತು ಸೇರಿ ಸೇವೆ, ಕಾಮಗಾರಿ ಕುರಿತ ದೂರು ದಾಖಲಿಸಲು ಆನ್ ಲೈನ್ ವ್ಯವಸ್ಥೆ

ಡ್ಯಾಷ್ ಬೋರ್ಡ್ ಆಧಾರಿತ ವೆಬ್, ಆಪ್ ಅಭಿವೃದ್ದಿಗೆ ಈಶ್ವರ ಖಂಡ್ರೆ ಸೂಚನೆ
ಬೆಂಗಳೂರು: ಗ್ರಾಮ ಪಂಚಾಯತಿ ಸೇವೆಗಳಿಗೆ ಸಂಬಂಧಿಸಿದಂತೆ ತಮ್ಮ ಅಹವಾಲುಗಳನ್ನು ದಾಖಲಿಸಲು ಗ್ರಾಮೀಣರಿಗೆ ಅನುವಾಗುವಂತೆ ಡ್ಯಾಷ್ ಬೋರ್ಡ್ ಆಧಾರಿತ ‘ದೂರು ದಾಖಲು- ಇತ್ಯರ್ಥಕ್ಕೆ ಆನ್ ಲೈನ್ ವ್ಯವಸ್ಥೆ’ ರೂಪಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಇಲಾಖೆಯ ಕಾರ್ಯದರ್ಶಿಯವರಿಗೆ ಲಿಖಿತ ಸೂಚನೆ ನೀಡಿರುವ ಅವರು, ಇ-ಸ್ವತ್ತು, ತೆರಿಗೆ ನಿರ್ಧರಣೆ, ಸಾಮಾಜಿಕ ಅರಣ್ಯೀಕರಣ, ಗ್ರಾ.ಪಂ.ವ್ಯಾಪ್ತಿಯ ಕೆರೆ ನಿರ್ವಹಣೆ, ಕೆರೆ ಒತ್ತುವರಿ, ಜೆಜೆಎಂ, ಕುಡಿಯುವ ನೀರಿನ ಸಮಸ್ಯೆ, ನೈರ್ಮಲ್ಯ, ಗ್ರಾಮೀಣ ರಸ್ತೆ, ವಿಬಿಜಿ ರಾಮ್ ಜಿ, ಗ್ರಾಮೀಣ ಆಸ್ತಿಗಳ ಸೃಜನೆ ಸೇರಿದಂತೆ ಯಾವುದೇ ಅಹವಾಲನ್ನು ಗ್ರಾಮೀಣರು ದಾಖಲಿಸಲು ಮತ್ತು ಅದಕ್ಕೆ ತಕ್ಷಣ ಸ್ಪಂದಿಸಲು ಈ ವ್ಯವಸ್ಥೆ ರೂಪಿಸಲು ನಿರ್ದೇಶನ ನೀಡಿದ್ದಾರೆ.
ರಾಜ್ಯದ ಸುಮಾರು ಅರ್ಧದಷ್ಟು ಜನಸಂಖ್ಯೆಯೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇರ ಸಂಪರ್ಕ ಹೊಂದಿದ್ದು, ಗ್ರಾಮೀಣರ ಕುಂದುಕೊರತೆಗೆ ಸ್ಪಂದಿಸುವುದು ಇಲಾಖೆಯ ಜವಾಬ್ದಾರಿಯಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇಲಾಖೆಯಲ್ಲಿ ಪಾರದರ್ಶಕತೆ ತರಲು, ಕೇಂದ್ರ ಹಾಗೂ ರಾಜ್ಯ ಪ್ರಾಯೋಜಿತ ಯೋಜನೆ ಕಾಮಗಾರಿಗಳಲ್ಲಿನ ಲೋಪದೋಷ, ಮೂಲಸೌಕರ್ಯ ಗುಣಮಟ್ಟ ಕೊರತೆ, ಗ್ರಾ.ಪಂ. ಒದಗಿಸುವ ವಿವಿಧ ಸೇವೆಗಳಲ್ಲಿನ ವಿಳಂಬ, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಚಿವಾಲಯಕ್ಕೆ ದೂರುಗಳು ಬರುತ್ತಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರು, ಗ್ರಾಮೀಣರು ಈ ಸಂಬಂಧ ವಿಡಿಯೋ ಮತ್ತು ಫೋಟೋ ಸಹಿತ ದೂರು ದಾಖಲಿಸಲು ಮತ್ತು ಈ ದೂರಿಗೆ ಸಂಬಂಧಿಸಿದಂತೆ ಕ್ರಮ ವಹಿಸುವ ಅಧಿಕಾರಿಯ ದೂರವಾಣಿ, ಹೆಸರು ಇತ್ಯಾದಿ ಮಾಹಿತಿ ಪಡೆಯಲು ಮತ್ತು ದೂರಿನ ಸ್ಥಿತಿಗತಿ ಅರಿಯಲು ಮಿಗಿಲಾಗಿ ನಿಗದಿತ ಕಾಲಮಿತಿಯಲ್ಲಿ ದೂರುಗಳನ್ನು ಇತ್ಯರ್ಥಪಡಿಸಲು ಅನುವಾಗುವಂತೆ ಸರಳ ಪ್ರಕ್ರಿಯೆಯ ಆಪ್ ಮತ್ತು ಡ್ಯಾಷ್ ಬೋರ್ಡ್ ಸಹಿತ ವೆಬ್ ಪೋರ್ಟಲ್ ಅಭಿವೃದ್ಧಿ ಪಡಿಸಲು ಕ್ರಮ ವಹಿಸುವಂತೆ ಈಶ್ವರ ಖಂಡ್ರೆ ಕಾರ್ಯದರ್ಶಿಯವರಿಗೆ ಸೂಚಿಸಿದ್ದಾರೆ.
ಜಿಬಿಎ, ಬಿಡಬ್ಲ್ಯುಎಸ್ಎಸ್.ಬಿ, ಬಿಡಿಎ, ಬಿಎಂ.ಆರ್.ಸಿ.ಎಲ್, ಬೆಸ್ಕಾಂ ಮೊದಲಾದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ದೂರು ದಾಖಲಿಸಿ ಪರಿಹಾರ ಪಡೆಯಲು https://nammabengaluru.org.in/ ಮತ್ತು Sahaaya ಆಪ್ ನಿರ್ಮಿಸಿರುವ ಮಾದರಿಯಲ್ಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ವಿಭಾಗಗಳ ಬಗ್ಗೆ ದೂರು ದಾಖಲಿಸಲು ಏಕ ಗವಾಕ್ಷಿ ಯೋಜನೆ ಜಾರಿಗೆ ತರುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.


Share It

You cannot copy content of this page