ಬೆಂಗಳೂರು: ನಗರದ ಆನೇಕಲ್ ಪ್ರದೇಶದಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದು, ಆರ್ ಆರ್ ನಗರದ ಆಸ್ಪತ್ರೆಗೆ ಅರಣ್ಯ ಹಾಗೂ ಪರಿಸರ ಸಚಿವ ರಾಮಲಿಂಗ ರೆಡ್ಡಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮೃತ ನಾಗರಾಜ್ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಅರಣ್ಯ ಸಚಿವರು, ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು. ಈ ವೇಳೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ಇವತ್ತು ಆನೆ ದಾಳಿಗೆ ನಾಗರಾಜ್ ಮೃತ ಪಟ್ಟಿದ್ದಾರೆ. ಆನೆಗಳು ಬನ್ನೇರುಘಟ್ಟದಿಂದ ಈ ಕಡೆ ಓಡಾಡುತ್ತೆ. ಹೊಸದಾಗಿ ರಸ್ತೆ ಆದ ಬಳಿಕ ಆನೆಗಳ ಓಡಾಟ ಜಾಸ್ತಿಯಾಗಿದೆ ಎಂದರು.
ಬನ್ನೇರುಘಟ್ಟದಿಂದ ಬಿಎಂಕಾವಲ್ ಭಾಗವಾಗಿ ಆನೆಗಳು ಓಡಾಡುತ್ತಿರುವ ಮಾಹಿತಿಯಿದೆ. ಕಾಡು ಬಿಟ್ಟು 5 ಕಿ.ಮೀ ಒಳಗಡೆ ಬಂದಿದೆ. ಈ ವೇಳೆ ಬೆಳಗ್ಗೆ ನಾಗರಾಜ್ ವಾಕಿಂಗ್ ಹೋಗ್ತಿದ್ರು. ಆಗ ಸೊಂಡಿಲಿನಲ್ಲಿ ಎತ್ತಿ ಅಟ್ಯಾಕ್ ಮಾಡಿದೆ. ಆನೆಗಳ ಬಗ್ಗೆ ಮಾಹಿತಿಯಿದ್ದ ಕಾರಣಕ್ಕೆ ರಾತ್ರಿ ಒಂದು ಗಂಟೆಯವರೆಗೆ ನಮ್ಮಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಆದರೆ ಆನೆಗಳು ಜನವಸತಿ ಪ್ರದೇಶಕ್ಕೆ ಬರುತ್ತವೇ ಎಂದುಕೊಂಡಿರ್ಲಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಮೃತನ ಕುಟುಂಬಕ್ಕೆ 20 ಲಕ್ಷ ಪರಿಹಾರ ಘೋಷಣೆ: ಪರಿಹಾರ ಪ್ರಾಣ ಹಿಂದಿರುಗಿಸಿ ತಂದುಕೊಡಲು ಸಾಧ್ಯವಿಲ್ಲ. ಆದರೆ ಮಾನವೀಯತೆ ಮತ್ತು ಸರ್ಕಾರ ನಡವಳಿಕೆಯಂತೆ ಪರಿಹಾರ ನೀಡುತ್ತಿದ್ದೇವೆ. ಸಾಕಾರ ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಮುಂದಿನ ದಿನಗಳಲ್ಲಿ ಆ ರೀತಿಯಾಗದಂತೆ ಕ್ರಮ ವಹಿಸ್ತೀವಿ, ಆನೆಗಳ ಓಡಾಟದ ಮೇಲೆ ವಿಶೇಷ ನಿಗಾ ವಹಿಸುತ್ತೇವೆ. ರಾಮನಗರದಿಂದ ಅರಣ್ಯ ಇಲಾಖೆ ತಂಡ ಬಂದಿದೆ, ಆನೆಗಳ ಓಡಾಟಕ್ಕೆ ಸಂಬಂಧಿಸಿ ವಿಶೇಷ ತಂಡ ರಚನೆ ಮಾಡಿದ್ದು, ರಾಮನಗರ, ಬನ್ನೇರುಘಟ್ಟ, ಬೆ.ನಗರ ಅರಣ್ಯ ಇಲಾಖೆಯ ತಂಡದಿಂದ ನಿಗಾ ಇಡಲಾಗಿದೆ ಎಂದರು.
ಡ್ರೋನ್ ಮೂಲಕ ಕಾರ್ಯಾಚರಣೆ ನಡೆಸಲು ಪ್ಲ್ಯಾನ್: ಒಂಟಿ ಸಲಗ ಸೆರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ನೂರು ಜನರ ತಂಡವನ್ನು ನೇಮಿಸಲಾಗಿದೆ. ದುಬಾರೆ ಕ್ಯಾಂಪ್ ನಿಂದ ನಾಲ್ಕು ಅನೆಗಳನ್ನು ತರಿಸಲು ತೀರ್ಮಾನ ಮಾಡಲಾಗಿದೆ. ನಾಳೆ ಬೆಳಗ್ಗೆ ದುಬಾರೆಯಿಂದ ಆಗಮಿಸಲಿರುವ ಆನೆಗಳು ಮತ್ತು 100 ಜನ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಒಟ್ಟು ಮೂರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆನೆ ಪ್ರಸ್ತುತ ಬಿಎಂ ಕಾವಲು ಎಂಬಲ್ಲಿದೆ ಎಂಬ ಮಾಹಿತಿಯಿದೆ. ಅದು ಅಲ್ಲಿಂದ ಹೊರ ಬಾರದಂತೆ ನೋಡಿಕೊಂಡು ಸೆರೆ ಹಿಡಿಯಲು ಸಿದ್ಧತೆ ನಡೆಸಲಾಗಿದೆ.

