ಸುದ್ದಿ

ನಾಪತ್ತೆಯಾಗಿರುವ ಇಂಜಿನಿಯರ್ ಪರ್ವೇಜ್ ಪತ್ತೆಗೆ ಸರ್ವ ಪ್ರಯತ್ನ: ಸಚಿವ ಈಶ್ವರ ಖಂಡ್ರೆ ಭರವಸೆ

Share It

ಬೆಂಗಳೂರು: ಕಳೆದ ಹಲವಾರು ದಿನಗಳಿಂದ ನಾಪತ್ತೆಯಾಗಿರುವ ಕೆಆರ್​ಐಡಿಎಲ್ ಗದಗ ಉಪ ವಿಭಾಗದ ಎಇಇ ಪರ್ವೇಜ್​ ಪತ್ತೆಗೆ ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಕೆಆರ್​ಐಡಿಎಲ್​ ಗದಗ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಪರ್ವೇಜ್ ಕೆಲ ದಿನಗಳಿಂದ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಚಿವ ಈಶ್ವರ ಬಿ ಖಂಡ್ರೆ ಅವರು ಮಂಗಳವಾರ ಕೆಆರ್​ಐಡಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೌಡ, ಮುಖ್ಯ ಎಂಜಿನಿಯರ್​ಗಳಾದ ತಿಮ್ಮರಾಜಪ್ಪ, ಶ್ರೀನಿವಾಸ್, ವೇಣುಗೋಪಾಲ್ ಹಾಗೂ ಗದಗದ ಎಂಜಿನಿಯರುಗಳೊಂದಿಗೆ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಸಚಿವರು ಪರ್ವೇಜ್ ಅವರ ತಂದೆ ಜಾಫರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಧೈರ್ಯ ಹೇಳಿದರು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿಜಿಪಿಯವರೊಂದಿಗೆ ಕೂಡ ತಾವು ಮಾತನಾಡಿದ್ದು, ಪರ್ವೇಜ್ ಅವರನ್ನು ಹುಡುಕಲು ಎಲ್ಲ ಕ್ರಮ ಕೈಗೊಳ್ಳುವಂತೆ ತಿಳಿಸಿರುವುದಾಗಿ ಹೇಳಿದರು.

ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಪರ್ವೇಜ್ ಅವರು ಹಣ ಪಾವತಿಗೆ ಸಂಬಂಧಿಸಿ ಆತಂಕ ಪಡುವ ಅಗತ್ಯವಿಲ್ಲ. ಪರ್ವೇಜ್ ನಿಮ್ಮನ್ನು ಸಂಪರ್ಕಿಸಿದರೆ ‘ಯಾವುದೇ ಸಮಸ್ಯೆ ಇದ್ದರೂ ಸರ್ಕಾರ ಅದನ್ನು ಪರಿಹರಿಸುತ್ತದೆ’ ಎಂದು ಮಗನಿಗೆ ತಿಳಿಸಿ ಎಂದು ಸಚಿವರು ಪರ್ವೇಜ್ ತಂದೆ ಜಾಫರ್ ಅವರಿಗೆ ಹೇಳಿದ್ದು, ಮನೆಯವರಿಗೆಲ್ಲಾ ಧೈರ್ಯ ಹೇಳುವಂತೆ ಮನವಿ ಮಾಡಿದರು.

ಇಂಜಿನಿಯರ್ ಪರ್ವೇಜ್ ನಾಪತ್ತೆಯಾಗಿರುವ ಪ್ರಕರಣದ ಬಗ್ಗೆ ತನಿಖೆ ಮಾಡಲೂ ಸೂಚಿಸಲಾಗಿದೆ. ಪರ್ವೇಜ್ ಅವರಿಗೆ ನ್ಯಾಯ ಕೊಡಿಸುತ್ತೇನೆ ಎಂದು ಈಶ್ವರ ಖಂಡ್ರೆ ಜಾಫರ್ ಅವರಿಗೆ ಧೈರ್ಯ ಹೇಳಿದರು. ಈ ಸಂದರ್ಭದಲ್ಲಿ ಕೆಆರ್​ಐಡಿಎಲ್. ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೌಡ ಹಾಜರಿದ್ದರು.


Share It

You cannot copy content of this page