ಉಪಯುಕ್ತ ಸುದ್ದಿ

ಮಾಹಿತಿ ಸುರಕ್ಷತೆ ವ್ಯವಸ್ಥೆಗಾಗಿ ಬೆಸ್ಕಾಂಗೆ NOC: ಮಾಹಿತಿ ಸುರಕ್ಷತೆ, ಸೈಬರ್ ಭದ್ರತೆ ಬಲವರ್ಧನೆಗೆ ಒತ್ತು

Share It

ಬೆಂಗಳೂರು: ಮಾಹಿತಿ ಸುರಕ್ಷತೆಯ ನಿರ್ವಹಣಾ ವ್ಯವಸ್ಥೆಗಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತಕ್ಕೆ (ಬೆಸ್ಕಾಂ) ಐಎಸ್‌ಓ/ಐಇಸಿ 27001:2022 ಪ್ರಮಾಣಪತ್ರ ದೊರೆತಿದೆ.

ಬೆಸ್ಕಾಂಗೆ ಲಭಿಸಿರುವ ಈ ಐಎಸ್‌ಓ/ಐಇಸಿ 27001:2022 ಪ್ರಮಾಣಪತ್ರವನ್ನು ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್ ಅವರಿಗೆ ಇಂಧನ ಭವನದಲ್ಲಿ ಬುಧವಾರ ಅಧಿಕೃತವಾಗಿ ಹಸ್ತಾಂತರಿಸಲಾಯಿತು.

ಸೈಬರ್ ಭದ್ರತೆಯ ಮಹತ್ವವನ್ನು ವಿವರಿಸಿದ ಸಚಿವ ಕೆ.ಜೆ. ಜಾರ್ಜ್ ಅವರು, “ಐಎಸ್‌ಓ/ಐಇಸಿ 27001:2022 ಪ್ರಮಾಣೀಕರಣವು ಬೆಸ್ಕಾಂನಲ್ಲಿ ಮಾಹಿತಿ ಸುರಕ್ಷತೆ ಮತ್ತು ಸೈಬರ್ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ವಿದ್ಯುತ್ ಕ್ಷೇತ್ರವು ಈಗ ಡಿಜಿಟಲ್ ವ್ಯವಸ್ಥೆ ಮತ್ತು ತಂತ್ರಜ್ಞಾನದ ಮೇಲೆ ಹೆಚ್ಚಾಗಿ ಅವಲಂಬಿತವಾಗುತ್ತಿರುವ ಹಿನ್ನೆಲೆಯಲ್ಲಿ, ಎಲ್ಲಾ ಪ್ರಮುಖ ಮಾಹಿತಿಯನ್ನು ಸಂರಕ್ಷಿಸಿಟ್ಟುಕೊಳ್ಳುವುದು ಅತ್ಯಗತ್ಯ. ಜಾಗತಿಕವಾಗಿ ಮಾನ್ಯತೆ ಪಡೆದ ಮಾಹಿತಿ ಸುರಕ್ಷತಾ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಜತೆಗೆ ತನ್ನ ಡಿಜಿಟಲ್ ಮೂಲಸೌಕರ್ಯದ ಭದ್ರತೆಯನ್ನು ಬಲಪಡಿಸುವ ಬೆಸ್ಕಾಂನ ಬದ್ಧತೆಗೆ ಸಾಕ್ಷಿಯಾಗಿ ಈ ಪ್ರಮಾಣಪತ್ರ ದೊರೆತಿದೆ,” ಎಂದರು.

“ಐಎಸ್‌ಓ/ಐಇಸಿ 27001:2022- ಮಾಹಿತಿ ಸುರಕ್ಷತೆಯ ನಿರ್ವಹಣೆಗೆ ಅಂತಾರಾಷ್ಟ್ರೀಯ ಮಾನ್ಯತೆಯ ಮಾನದಂಡವಾಗಿದೆ. ಮಾಹಿತಿ ಸುರಕ್ಷತೆಗೆ ಒದಗಬಹುದಾದ ಅಪಾಯಗಳನ್ನು ಗುರುತಿಸುವುದು, ಸೂಕ್ತ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವುದು ಹಾಗೂ ಮಾಹಿತಿ ಸುರಕ್ಷತೆಯ ನಿಯಮಗಳನ್ನು ನಿರಂತರವಾಗಿ ಪಾಲಿಸಿ ಕಾಲಕಾಲಕ್ಕೆ ಅವುಗಳನ್ನು ಸುಧಾರಿಸುವುದಕ್ಕಾಗಿ ಇದು ವ್ಯವಸ್ಥಿತ ಚೌಕಟ್ಟನ್ನು ಒದಗಿಸುತ್ತದೆ,” ಎಂದು ಅವರು ಹೇಳಿದರು.

“ಕೇಂದ್ರ ವಿದ್ಯುತ್‌ ಪ್ರಾಧಿಕಾರದ ವಿದ್ಯುತ್‌ ಕ್ಷೇತ್ರದಲ್ಲಿನ ಸೈಬರ್‌ ಭದ್ರತೆಯಮಾರ್ಗಸೂಚಿ 2021ರಂತೆ ಈ ಉಪಕ್ರಮ ಕೈಗೊಳ್ಳಲಾಗಿದೆ. ಮಾರ್ಗಸೂಚಿಯ ಆರ್ಟಿಕಲ್ 1 – ಸೈಬರ್‌ ಭದ್ರತೆ ನೀತಿಯಡಿ ಐಎಸ್‌ಓ/ಐಇಸಿ 27001:2022- ಪ್ರಮಾಣೀಕರಣ ಹೊಂದಿರಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ,” ಎಂದು ಸಚಿವರು ವಿವರಿಸಿದರು.

“ಬೆಸ್ಕಾಂನ ಎಲ್ಲಾ ಸಂಬಂಧಿತ ವಿಭಾಗಗಳು ಮತ್ತು ಪಾಲುದಾರರ ಸಕ್ರಿಯ ಸಹಕಾರ ಹಾಗೂ ಬದ್ಧತೆಯಿಂದ ಪ್ರಮಾಣೀಕರಣ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗಿದೆ. ಗುರುತಿಸಲಾದ ದೋಷಗಳನ್ನು ಸಮಯೋಚಿತವಾಗಿ ಸರಿಪಡಿಸುವ ಜತೆಗೆ ಅವುಗಳ ಸಮರ್ಪಕ ಅನುಷ್ಠಾನವನ್ನು ಖಾತರಿಪಡಿಸಿಕೊಂಡ ನಂತರ ಪ್ರಮಾಣೀಕರಣದ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ,” ಎಂದು ಅವರು ಹೇಳಿದರು.

ಮಾಹಿತಿ ಸುರಕ್ಷತೆಗೆ ಬಲ: ಈ ಪ್ರಮಾಣೀಕರಣವು ಬೆಸ್ಕಾಂನ ಕಾರ್ಯ ಕ್ಷಮತೆ ಹೆಚ್ಚಿಸುವ ಜತೆಗೆ ಸಂಭಾವ್ಯ ಆರ್ಥಿಕ ನಷ್ಟವನ್ನು ಕಡಿಮೆ ಮಾಡುವುದು ಹಾಗೂ ಮಾಹಿತಿ ಸಂಪನ್ಮೂಲಗಳ ರಕ್ಷಣೆಗೆ ಸಹಕಾರಿಯಾಗಲಿದೆ. ಬೆಸ್ಕಾಂನ ಎಲ್ಲ ಡಿಜಿಟಲ್ ವ್ಯವಸ್ಥೆಗಳಲ್ಲಿ ಐಎಸ್‌ಎಂಎಸ್‌ ಅನುಷ್ಠಾನಗೊಳಿಸುವ ಮೂಲಕ ಸಂಭವನೀಯ ಡಿಜಿಟಲ್‌ ಅಪಾಯಗಳು ಮತ್ತು ಬೆದರಿಕೆಗಳಿಂದ ರಕ್ಷಣೆ ಪಡೆಯಬಹುದಾಗಿದೆ. ಐಎಸ್‌ಎಂಎಸ್‌ನ ಮಾಹಿತಿ ಸುರಕ್ಷತೆಯ ಮೂರು ಮೂಲಭೂತ ತತ್ವಗಳಾದ ಗೌಪ್ಯತೆ, ಸಮಗ್ರತೆ ಮತ್ತು ಲಭ್ಯತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಇದರಿಂದ ಮಾಹಿತಿಯ ಭದ್ರತೆ, ನಿಖರತೆ ಕಾಯ್ದುಕೊಳ್ಳಲಾಗುತ್ತದೆ. ಜತೆಗೆ ಅಗತ್ಯವಿರುವಾಗ ಅಧಿಕೃತ ಬಳಕೆದಾರರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲು ಸಾಧ್ಯವಾಗಲಿದೆ.

“ಬೆಸ್ಕಾಂನ ವಿವಿಧ ವಿಭಾಗಗಳು ಮತ್ತು ಪಾಲುದಾರರ ಸಮನ್ವಯದ ಪ್ರಯತ್ನದ ಫಲವಾಗಿ ಐಎಸ್‌ಓ/ಐಇಸಿ 27001:2022 ಪ್ರಮಾಣೀಕರಣ ಪ್ರಕ್ರಿಯೆಯ ಯಶಸ್ವಿಯಾಗಿದೆ. ಮಾಹಿತಿ ಸುರಕ್ಷತೆ ನಿರ್ವಹಣಾ ವ್ಯವಸ್ಥೆ ಸಂಭವನೀಯ ಅಪಾಯಗಳನ್ನು ಗುರುತಿಸಿ, ಅಗತ್ಯ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲು ಸಹಕರಿಸುತ್ತದೆ. ಸುರಕ್ಷತಾ ಕ್ರಮಗಳ ಪಾಲನೆ ಹಾಗೂ ಅಗತ್ಯವಿದ್ದ ಸಂದರ್ಭದಲ್ಲಿ ಸುಧಾರಿಸಿಕೊಳ್ಳಲು ವ್ಯವಸ್ಥಿತ ವಿಧಾನ ಒದಗಿಸುತ್ತದೆ. ಇದರಿಂದ ಬೆಸ್ಕಾಂನ ಡಿಜಿಟಲ್ ವ್ಯವಸ್ಥೆಗಳು, ಕಾರ್ಯಾಚರಣೆ ಮತ್ತು ಸೈಬರ್ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಸಾಧ್ಯವಾಗಲಿದೆ.”

  • ಡಾ. ಎನ್. ಶಿವಶಂಕರ, ವ್ಯವಸ್ಥಾಪಕ ನಿರ್ದೇಶಕರು, ಬೆಸ್ಕಾಂ

Share It

You cannot copy content of this page