ಸಿನಿಮಾ ಸುದ್ದಿ

ಆಸ್ಕರ್ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮರಾಠಿ ಚಿತ್ರ ‘ಗೊಂದಲ್’

Share It

99ನೇ ಅಕಾಡೆಮಿ ಅವಾರ್ಡ್ಸ್ಗೆ ಭಾರತದ ಅಧಿಕೃತ ನಾಮನಿರ್ದೇಶನ ಪಡೆದ ಮರಾಠಿ ಸೈಕಲಾಜಿಕಲ್ ಥ್ರಿಲ್ಲರ್, ಅಕ್ಟೋಬರ್ 10ರಿಂದ ಆಯ್ದ ನಗರಗಳಲ್ಲಿ ಪೇಯ್ಡ್ ಪ್ರೀಮಿಯರ್ ಪ್ರದರ್ಶನ

2027ರಲ್ಲಿ ನಡೆಯಲಿರುವ 99ನೇ ಅಕಾಡೆಮಿ ಅವಾರ್ಡ್ಸ್ (ಆಸ್ಕರ್) ಪ್ರಶಸ್ತಿ ಸಮಾರಂಭಕ್ಕೆ ಭಾರತದ ಅಧಿಕೃತ ಪ್ರವೇಶವಾಗಿ ಮರಾಠಿ ಚಿತ್ರ ‘ಗೊಂದಲ್’ ಆಯ್ಕೆಯಾಗಿದೆ. ಈ ಸುದ್ದಿ ಹೊರಬರುತ್ತಿದ್ದಂತೆಯೇ ಚಿತ್ರತಂಡವು ಆಸ್ಕರ್ ಅಕಾಡೆಮಿ ಸದಸ್ಯರಿಗೆ ಚಿತ್ರವನ್ನು ಪರಿಚಯಿಸುವ ಉದ್ದೇಶದಿಂದ ಬೃಹತ್ ಪ್ರಚಾರ ಚಟುವಟಿಕೆಗಳನ್ನು ಆರಂಭಿಸಿದೆ.

ದಾವಖರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ದೀಕ್ಷಾ ದಾವಖರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಕ್ಟೋಬರ್ 10ರಿಂದ ದೇಶದ ಆಯ್ದ ಚಿತ್ರಮಂದಿರಗಳಲ್ಲಿ ‘ಗೊಂದಲ್’ ಚಿತ್ರದ ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳು ನಡೆಯಲಿವೆ ಎಂದು ಚಿತ್ರತಂಡವು ಪ್ರಕಟಿಸಿದೆ.

ಗುರುವಾರ ದಾವಖರ್ ಫಿಲ್ಮ್ಸ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಷಯವನ್ನು ತಿಳಿಸಿದೆ. “99ನೇ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಪ್ರವೇಶವಾಗಿರುವ ‘ಗೊಂದಲ್’, ವಿಶ್ವಾದ್ಯಂತ ಬಿಡುಗಡೆಯಾಗುವ ಮೊದಲೇ ಚಿತ್ರಪ್ರೇಮಿಗಳಿಗಾಗಿ ಅಕ್ಟೋಬರ್ 10ರಿಂದ ಆಯ್ದ ನಗರಗಳಲ್ಲಿ ಪೇಯ್ಡ್ ಪ್ರೀಮಿಯರ್ ಮೂಲಕ ತೆರೆದುಕೊಳ್ಳುತ್ತಿದೆ. ಇದು ಸಂಸ್ಕೃತಿಯ ಬೇರುಗಳನ್ನು ಹೊಂದಿರುವ ಜೊತೆಗೆ ಮನುಷ್ಯನ ಮನಸ್ಸಿನ ಸಂಕೀರ್ಣತೆಗಳನ್ನು ಬಯಲು ಮಾಡುವ ಮರಾಠಿ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾಗಿದೆ” ಎಂದು ಬರೆಯಲಾಗಿದೆ.

ಸಂತೋಷ್ ದಾವಖರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಿಶೋರ್ ಕದಮ್, ಇಶಿತಾ ದೇಶಮುಖ್, ಯೋಗೇಶ್ ಸೋಹೋನಿ, ನಿಶಾದ್ ಭೋಯಿರ್ ಮತ್ತು ಅನುಜ್ ಪ್ರಭು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಿರ್ದೇಶಕರ ಪ್ರತಿಕ್ರಿಯೆ

ಭಾರತದ ಅಧಿಕೃತ ಪ್ರವೇಶವಾಗಿ ಚಿತ್ರ ಆಯ್ಕೆಯಾದ ಬಗ್ಗೆ ನಿರ್ದೇಶಕ ಹಾಗೂ ನಿರ್ಮಾಪಕ ಸಂತೋಷ್ ದಾವಖರ್ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದಾರೆ.

“ನಾವು ಮಾಡಿದ ಪ್ರಾಜೆಕ್ಟ್ ಬಗ್ಗೆ ನಮಗೆ ಆರಂಭದಿಂದಲೂ ಭರವಸೆ ಇತ್ತು. ಇಡೀ ಗೊಂದಲ್ ತಂಡವು ಅದ್ಭುತ ಚಿತ್ರವೊಂದನ್ನು ನಿರ್ಮಿಸಿದೆ ಎಂಬ ನಂಬಿಕೆ ನಮಗಿತ್ತು. ಕಳೆದ ಒಂದು ವರ್ಷದಿಂದ ನಾವು ಇದಕ್ಕಾಗಿ ಸಿದ್ಧತೆ ನಡೆಸುತ್ತಿದ್ದೆವು. ಹೇಗಾದರೂ ಆಸ್ಕರ್ ತಲುಪಬೇಕು ಎಂದು ನಾವು ದೃಢಸಂಕಲ್ಪ ಮಾಡಿದ್ದೆವು” ಎಂದು ಅವರು ಹೇಳಿದ್ದಾರೆ.

ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿರುವುದು ನಮಗೆ ದೊರೆತ ದೊಡ್ಡ ಆಶೀರ್ವಾದ ಎಂದಿರುವ ಅವರು, ಈ ಆಯ್ಕೆಯು ಇಡೀ ತಂಡದ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.

“ನೀವು ಆಸ್ಕರ್ ಮತದಾರರ ಮುಂದೆ ಹೋಗುತ್ತಿದ್ದೀರಿ ಎಂದರೆ, ಅಲ್ಲಿ ನೀವು ನಿಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದೀರಿ ಎಂದರ್ಥ. ಇದು ನಮ್ಮ ಗೊಂದಲ್ ತಂಡಕ್ಕೆ ಹಾಗೂ ನಿರ್ದೇಶಕನಾಗಿ ನನಗೂ ಬಹಳ ದೊಡ್ಡ ಜವಾಬ್ದಾರಿಯಾಗಿದೆ” ಎಂದು ಸಂತೋಷ್ ವಿವರಿಸಿದ್ದಾರೆ.

ಆಸ್ಕರ್ ಕಡೆಗಿನ ಪ್ರಯಾಣ

ನಿರ್ದೇಶಕರ ಪ್ರಕಾರ, ಮುಂದಿನ ಕೆಲವು ತಿಂಗಳುಗಳ ಕಾಲ ಆಸ್ಕರ್ ಅಕಾಡೆಮಿ ಸದಸ್ಯರಿಗೆ ಚಿತ್ರವನ್ನು ತಲುಪಿಸಲು ತೀವ್ರ ಪ್ರಚಾರ ನಡೆಸಬೇಕಿದೆ.

“ಮುಂದಿನ ಕೆಲವು ತಿಂಗಳು ನಾವು ಕಠಿಣ ಶ್ರಮ ಹಾಕಬೇಕಿದೆ. ಏಕೆಂದರೆ ನಾವು ಕನಿಷ್ಠ 6,000 ರಿಂದ 7,000 ಮತಗಳನ್ನು ಪಡೆಯಲೇಬೇಕಿದೆ” ಎಂದು ಅವರು ಹೇಳಿದ್ದಾರೆ.

‘ಗೊಂದಲ್’ ಚಿತ್ರ ಹುಟ್ಟಿಕೊಂಡ ಬಗೆಯನ್ನೂ ನಿರ್ದೇಶಕರು ಹಂಚಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ಎಲ್ಲರ ಗಮನ ಸೆಳೆಯುವಂತಹ ಚಿತ್ರವೊಂದನ್ನು ನಿರ್ಮಿಸಬೇಕು ಎಂಬುದು ಅವರ ಆಸೆಯಾಗಿತ್ತಂತೆ.

“ಭಾರತದಲ್ಲಿ ಸಿನಿಮಾ ರಂಗಕ್ಕೆ ಸಂಬಂಧಿಸಿದ ಪ್ರತಿಯೊಬ್ಬ ತಂತ್ರಜ್ಞನೂ ಈ ಚಿತ್ರವನ್ನು ಹುಡುಕಿಕೊಂಡು ಬಂದು ನೋಡಬೇಕು. ಆ ರೀತಿಯಲ್ಲಿ ನಾನು ಈ ಚಿತ್ರವನ್ನು ನಿರ್ಮಿಸಿದ್ದೇನೆ” ಎಂದಿದ್ದಾರೆ.

ಆಸ್ಕರ್ ಆಯ್ಕೆಯನ್ನು ಇತರ ಭಾರತೀಯ ಚಿತ್ರಗಳೊಂದಿಗಿನ ಪೈಪೋಟಿ ಎಂದು ಪರಿಗಣಿಸುವ ಬದಲು, ‘ಗೊಂದಲ್’ ಇಡೀ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸುತ್ತಿದೆ ಎಂದು ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅಕಾಡೆಮಿ ಸದಸ್ಯರಿಗೆ ಚಿತ್ರವನ್ನು ಪರಿಚಯಿಸಲು ಬಿರುಸಿನ ಪ್ರಚಾರ ನಡೆಸಲಿದ್ದು, 6,000 ರಿಂದ 7,000 ಮತಗಳನ್ನು ಗಳಿಸುವ ಗುರಿ ಇದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಪರಿಶೀಲನೆಗೆ ಬಂದಿದ್ದ ಹಲವು ಚಿತ್ರಗಳ ಪೈಕಿ ಸುಮಾರು ಎರಡು ಗಂಟೆಗಳ ಅವಧಿಯ ಈ ಚಿತ್ರವನ್ನು ಆಯ್ಕೆ ಮಾಡಲಾಗಿದೆ.


Share It

You cannot copy content of this page