ಉಪಯುಕ್ತ ರಾಜಕೀಯ ಸುದ್ದಿ

ಅಕ್ಟೋಬರ್ ಅಂತ್ಯಕ್ಕೆ ‘ನೇಗಿಲ ಯೋಗಿ ಯೋಜನೆ’ ಅನುಷ್ಟಾನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ

Share It

ಬೆಂಗಳೂರು:ಸಣ್ಣ ಮತ್ತು ಅತಿಸಣ್ಣ ರೈತರ ನೆರವಿಗೆ ಧಾವಿಸಲು ರಾಜ್ಯ ಸರ್ಕಾರ ಆರಂಭಿಸಿರುವ ಮಹತ್ವಾಕಾಂಕ್ಷೆಯ  ‘ಮುಖ್ಯಮಂತ್ರಿ ನೇಗಿಲ ಯೋಗಿ’ ಯೋಜನೆಯನ್ನು ಅಕ್ಟೋಬರ್ ಅಂತ್ಯದೊಳಗೆ ಅನುಷ್ಟಾನಗೊಳಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೃಷಿ ಇಲಾಖೆ‌ ಅಧಿಕಾರಿಗಳಿಗೆ ಸೂಚಿಸಿದರು.
   
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ (ಅ.05) ನಡೆದ ಮುಖ್ಯಮಂತ್ರಿಗಳ 100 ದಿನಗಳ ಕಾರ್ಯ, ನೇಮಕಾತಿಗಳು ಹಾಗೂ ಆದ್ಯತೆ ಯೋಜನೆಗಳ ಪರಿಶೀಲನೆ ಸಭೆ’ಯಲ್ಲಿ ಕೃಷಿ ಇಲಾಖೆಯ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.ಮುಖ್ಯಮಂತ್ರಿ ನೇಗಿಲ ಯೋಗಿ‌ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರತಿ ಜಿಲ್ಲೆಯ ಒಂದು ತಾಲೂಕಿನಲ್ಲಿ‌ ಅನುಷ್ಠಾನಗೊಳಿಸಲು ಸಂಪುಟ‌ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಈಗ ಯೋಜನೆಯನ್ನು ಎರಡು ತಾಲೂಕುಗಳಿಗೆ ವಿಸ್ತರಿಸಿ, ಇದೇ ತಿಂಗಳಾಂತ್ಯಕ್ಕೆ ಯೋಜನೆ ಅನುಷ್ಟಾನಗೊಳಿಸಬೇಕು. ಪ್ರಸ್ತುತ, 11 ಜಿಲ್ಲಾ ಉಸ್ತುವಾರಿ ಸಚಿವರಿಂದ ಮಾಹಿತಿ ಬಂದಿದೆ. ಇನ್ನೊಂದು ವಾರದಲ್ಲಿ ಎಲ್ಲಾ ಜಿಲ್ಲೆಗಳ‌ ಮಾಹಿತಿ ತಲುಪಿಸಬೇಕು ಎಂದು ಸಿಎಂ ಸೂಚನೆ ನೀಡಿದರು.

ಯೋಜನೆ ಅನುಷ್ಟಾನಕ್ಕೆ ಪ್ರತ್ಯೇಕ ಆ್ಯಪ್ ಅಭಿವೃದ್ಧಿ:ಪ್ರಸ್ತುತ, ರೈತರ ಬಳಿ‌ ಲಭ್ಯವಿರುವ ಟ್ರ್ಯಾಕ್ಟರ್ ಹಾಗೂ ಇತರೆ ಯಂತ್ರೋಪಕರಣಗಳ ಮಾಹಿತಿ ಪಡೆಯಲು ಪ್ರತ್ಯೇಕ‌ ಆ್ಯಪ್ ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ. ಸರ್ಕಾರಿ ಏಜೆನ್ಸಿಯಿಂದಲೇ ಆ್ಯಪ್ ತಯಾರಿಸಿ, ಅದಕ್ಕೆ ಕೃಷಿ ಹಾಗೂ ತೋಟಗಾರಿಕಾ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಫ್ರೂಟ್ ಐಡಿಯನ್ನು   ಸಂಯೋಜಿಸಲಾಗುವುದು. ಆಗ ರೈತರು ತಾವಿರುವಲ್ಲೇ ಆ್ಯಪ್ ಮೂಲಕ ಟ್ರ್ಯಾಕ್ಟರ್ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಟ್ರ್ಯಾಕ್ಟರ್ ವೆಚ್ಚದ ಶೇ 50 ರಷ್ಟು ಹಣವನ್ನು ಸರ್ಕಾರ ಪಾವತಿಸುವುದರಿಂದ ಸಣ್ಣ ರೈತರಿಗೆ ಅನುಕೂಲವಾಗಲಿದೆ. ಹಾಗಾಗಿ ಅಕ್ಟೋಬರ್ ತಿಂಗಳೊಳಗೆ ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆಯನ್ನು ಅನುಷ್ಟಾನ ಮಾಡಬೇಕು ಎಂದು ಅಧಿಕಾರಿಗಳು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದರು.
 
ಏನಿದು ‘ನೇಗಿಲ ಯೋಗಿ’ಯೋಜನೆ?: ಮೂರು ಎಕರೆ ಹಾಗೂ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ಬಡ ಮತ್ತು ಸಣ್ಣ ರೈತರ ಜಮೀನುಗಳ ಉಳುಮೆಗೆ‌  ನೆರವಾಗುವ  ಸಲುವಾಗಿ  ರಾಜ್ಯ  ಸರ್ಕಾರ  ಓಲಾ,  ಉಬರ್  ಮಾದರಿಯಲ್ಲಿ  ‘ಮುಖ್ಯಮಂತ್ರಿ  ನೇಗಿಲ  ಯೋಗಿ’ ಅನುಷ್ಟಾನಗೊಳಿಸಲು‌  ಮುಂದಾಗಿದೆ. ಸರ್ಕಾರ ಅಭಿವೃದ್ಧಿಪಡಿಸುವ ಆ್ಯಪ್ ಮೂಲಕವೇ ಅಗತ್ಯವಿರುವ ರೈತರು ಉಳುಮೆಗೆ ಟ್ರ್ಯಾಕ್ಟರ್ ಬುಕ್ಕಿಂಗ್ ಮಾಡಬಹುದಾಗಿದೆ. ಈ ರೀತಿ ಬುಕ್ಕಿಂಗ್ ಮಾಡಲಾದ ಟ್ರ್ಯಾಕ್ಟರ್ ಗೆ ಶೇ 50 ರಷ್ಟು ಬಾಡಿಗೆ ಹಣವನ್ನು ರೈತರು ಪಾವರಿಸಿದರೆ, ಉಳಿದ ಶೇ 50 ರಷ್ಟು ಹಣವನ್ನು ಸರ್ಕಾರ ಟ್ರ್ಯಾಕ್ಟರ್ ಮಾಲೀಕರಿಗೆ ಪಾವತಿಸಲಿದೆ.

ಈ ಯೋಜನೆಯಿಂದ ರಾಜ್ಯದ ಸುಮಾರು 59 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅನುಕೂಲವಾಗಲಿದೆ. ಪ್ರಸ್ತುತ, ಈ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರತಿ ಜಿಲ್ಲೆಯ ಎರಡೆರಡು ತಾಲೂಕುಗಳಲ್ಲಿ ಅನುಷ್ಟಾನಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಕೃಷಿಯಿಂದ ವಿಮುಖರಾಗುತ್ತಿರುವ ಸಣ್ಣ ರೈತರಿಗೆ ಕೃಷಿ ವೆಚ್ಚ ತಗ್ಗಿಸಲು ಹಾಗೂ ಭೂಮಿಯನ್ನು ಹದಗೊಳಿಸಲು ನೆರವಾಗುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.

ಜಿಕೆವಿಕೆಯಲ್ಲಿ ಬೃಹತ್ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ‌ ನಿರ್ದೇಶನ:ಕೃಷಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು‌ ಮಾತನಾಡಿ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತವನ್ನು (KAPPEC) ಇನ್ನಷ್ಟು ಬಲಪಡಿಸಬೇಕು. ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಕೃಷಿ ಸೇರಿದಂತೆ ಸಂಬಂಧಿತ ಕ್ಷೇತ್ರಗಳಿಗೆ ಬೆಂಬಲ ಹಾಗೂ ನೆರವು ನೀಡಬೇಕು. ಪ್ರಸ್ತುತ ಹೆಬ್ಬಾಳದ ಅಂತಾರಾಷ್ಟ್ರೀಯ ಪುಷ್ಪ ಹರಾಜಿ ಕೇಂದ್ರ ಚಿಕ್ಕದಾಗಿದ್ದು, ಹೂವುಗಳ ರಫ್ತಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಜಿ.ಕೆ.ವಿ.ಕೆ ಯಲ್ಲಿ 5 ಎಕರೆ ಗುರುತಿಸಲು ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಯಿತು.ಕೃಷಿ ಉತ್ಪನ್ನಗಳ ರಫ್ತು ಉತ್ತೇಜಿಸಲು ಮತ್ತು ಪ್ರಮಾಣ ಹೆಚ್ಚಿಸಲು ರೈತರಿಗೆ ಶೈತ್ಯಾಗಾರ (ಕೋಲ್ಡ್ ಸ್ಟೋರೇಜ್) ಹಾಗೂ ಬೃಹತ್ ಸಂಸ್ಕರಣಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಮನವಿ ಮಾಡಿದರು.

ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ :ಉಪಗ್ರಹ ಆಧಾರಿತ ಹಾಗೂ ಡೋನ್ ತಂತ್ರಜ್ಞಾನ ಆಧಾರಿತ ಬೆಳೆ ಮೌಲ್ಯಮಾಪನ ಮತ್ತು ಇಳುವರಿ ಅಂದಾಜು ಮಾಡಲು ಹಾಗೂ ಡಿಜಿಟಲ್ ಬೆಳೆ ಸಮೀಕ್ಷೆ ನಡೆಸಲು ಮುಖ್ಯಮಂತ್ರಿಗಳ ರೈತ ಚೈತನ್ಯ ಯೋಜನೆ ಜಾರಿಗೆ ತರಲಾಗಿದೆ.ಯೋಜನೆಗೆ ಸಂಬಂಧಿಸಿದ ಪ್ರಾಯೋಗಿಕ ಕಾರ್ಯಕ್ರಮಗಳು ಸಿದ್ದತೆ ಹಂತದಲ್ಲಿವೆ. ರಾಜ್ಯ ಸರ್ಕಾರವು ರೈತ ಚೈತನ್ಯ ಯೋಜನೆಯಡಿ ಸಂದೇಶಗಳನ್ನು ಅನುಮೋದಿಸಲು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ.ಅ.3 ರವರೆಗೆ ಈ ವ್ಯವಸ್ಥೆಯಡಿ  25 ಲಕ್ಷ ಸಂದೇಶಗಳನ್ನು ಕಳುಹಿಸಲಾಗಿದೆ. ಇನ್ನು ಚಾಟ್ ಬಾಟ್ ಹಾಗೂ ಕರೆಗಳ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಅಭಿವೃದ್ಧಿ ಹಂತದಲ್ಲಿದೆ. ರೈತ ಚೈತನ್ಯ ಯೋಜನೆಯಡಿ SMS ಸಂದೇಶಗಳೊಂದಿಗೆ ವೀಡಿಯೋ ಸಂದೇಶ ಕಳುಹಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಲಹೆ ನೀಡಿದರು. ಕೃಷಿ, ಸಹಕಾರ‌, ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.


Share It

You cannot copy content of this page