ಬೆಂಗಳೂರು: ಸುಪ್ರಿಂಕೋರ್ಟ್ ಆದೇಶವನ್ನ ನಕಲು ಮಾಡಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಅಪರಾಧಿ ಬಿಡುಗಡೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ಕೃತ್ಯದಲ್ಲಿ ಶಾಮೀಲಾಗಿರುವ ಆರೋಪದಡಿ ಅಂದಿನ ಮುಖ್ಯ ಅಧೀಕ್ಷಕ ಹಾಗೂ ಹಾಲಿ ಕಲಬುರಗಿಯ ಡಿಐಜಿ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಎಂ.ಸೋಮಶೇಖರ್ ಬಂಧಿತ ಆರೋಪಿ. ಪ್ರಾಥಮಿಕ ವಿಚಾರಣೆ ವೇಳೆ ತನಿಖೆಗೆ ಸಹಕರಿಸದೇ ಮಾಹಿತಿ ಮರೆಮಾಚಿದ ಆರೋಪದಡಿ ಬಂಧಿಸಲಾಗಿದ್ದು, ಸೋಮವಾರ 9ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಅ.9ರವರೆಗೆ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶವನ್ನ ನಕಲಿಯಾಗಿ ಸೃಷ್ಟಿಸಿ 2018 ನ.13ರಂದು ಜೈಲಿನಿಂದ ಬಿಡುಗಡೆಯಾಗಿದ್ದ ಅಪರಾಧಿ ಶಂಕರ್, ನಕಲಿ ಆದೇಶ ಸೃಷ್ಟಿಸಲು ಸಹಕರಿಸಿದ್ದ ಕೇಂದ್ರ ಕಾರಾಗೃಹದ ಶಿಕ್ಷಾ ಬಂಧಿ ವಿಭಾಗದ ಹಾಲಿ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಶ್ರೀಕಾಂತ್ ಎಂಬಾತನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಅಂದಿನ ಜೈಲು ಮುಖ್ಯ ಅಧೀಕ್ಷಕರಾಗಿದ್ದ ಸೋಮಶೇಖರ್ ಅವರ ಕೈವಾಡ ಬಗ್ಗೆ ತಿಳಿದುಬಂದಿತ್ತು. ಇದಕ್ಕೆ ಪೂರಕವಾಗಿ ಸಜಾಬಂಧಿ ಶಂಕರ್ ಪತ್ನಿಯು ಸಹ ವಿಚಾರಣೆಯಲ್ಲಿ ಅಧೀಕ್ಷಕರ ಪಾತ್ರವಿರುವುದಾಗಿ ಹೇಳಿಕೆ ನೀಡಿದ್ದರು. ಈ ಮಾಹಿತಿ ಆಧರಿಸಿ ಅ.4ರಂದು ವಶಕ್ಕೆ ಪಡೆದು ವಿಚಾರಿಸಿದಾಗ ತನಿಖೆಗೆ ಸಹಕರಿಸಿದೆ ಪ್ರಕರಣ ಕುರಿತು ಮಾಹಿತಿ ಮರೆಮಾಚಿದ್ದಾರೆ. ಈ ಸಂಬಂಧ ಬಂಧಿಸಿ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣದಲ್ಲಿ ಡಿಐಜಿ ಮೂರನೇ ಆರೋಪಿಯಾಗಿದ್ದು, ತನಿಖೆ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ಹಿನ್ನೆಲೆ: 2001ರಲ್ಲಿಅಪಹರಣ ಮತ್ತು ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಶಂಕರ್ಗೆ 2004ರಲ್ಲಿ ತ್ವರಿತಗತಿ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿತ್ತು. ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ಗೆ ಶಂಕರ್ ಮೊರೆ ಹೋಗಿದ್ದ. ಈತನ ಅರ್ಜಿಯನ್ನ ತಿರಸ್ಕರಿದ್ದವು. ಶಿಕ್ಷೆಯಿಂದ ಪಾರಾಗಲು ಸಂಚು ರೂಪಿಸಿದ ಶಂಕರ್, ಸುಪ್ರೀಂಕೋರ್ಟ್ ಆದೇಶವನ್ನ ನಕಲಿಯಾಗಿ ಸೃಷ್ಟಿಸಿಕೊಂಡು 2018ರ ನವೆಂಬರ್ನಲ್ಲಿ ಜೈಲಾಧಿಕಾರಿಗಳಿಗೆ ತೋರಿಸಿ 10 ಸಾವಿರ ದಂಡ ತೆತ್ತು ಬಿಡುಗಡೆಯಾಗಿದ್ದ.
