ಸುದ್ದಿ

ಅಂಬೇಡ್ಕರ್ ಬರೀ ಸಂವಿಧಾನ ಶಿಲ್ಪಿಯಲ್ಲ, ಆಧುನಿಕ ಭಾರತದ ನಿರ್ಮಾತೃ : ಪತ್ರಕರ್ತ ವಿಶ್ವೇಶ್ವರ ಭಟ್ ಅಭಿಪ್ರಾಯ

Share It

ಬೆಂಗಳೂರು: ಅಂಬೇಡ್ಕರ್ ಎಂದರೆ ಕೇವಲ ಸಂವಿಧಾನ ಶಿಲ್ಪಿಯಲ್ಲ ಅವರು ಆಧುನಿಕ ಭಾರತದ ನಿರ್ಮಾತೃ ಎಂದು ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಸಾಹಿತಿ ಡಿ.ಎಸ್. ವೀರಯ್ಯ ಅವರ ರಾಷ್ಟ್ರಚಿಕಿತ್ಸಕ ಅಂಬೇಡ್ಕರ್ ಪುಸ್ತಕ ಬಿಡುಗಡೆ ಮಾಡಿದ ನಂತರ ಮಾತನಾಡಿದ ಅವರು, ಅಂಬೇಡ್ಕರ್ ಎಂದರೆ ಭಾರತದ ಸಂವಿಧಾನ ಶಿಲ್ಪಿ ಎಂದಷ್ಟೇ ನಾವು ತಿಳಿದುಕೊಂಡಿದ್ದೇವೆ. ಆದರೆ, ಅವರು ಅದಕ್ಕಿಂತ ಹೆಚ್ಚಿನ ಕೊಡುಗೆಯನ್ನು ದೇಶಕ್ಕೆ ನೀಡಿದ್ದಾರೆ. ಇಂದಿನ ಆಧುನಿಕ ಭಾರತದ ಕನಸು ಸಾಕಾರಾಗೊಳ್ಳಲು ಅಡಿಪಾಯ ಹಾಕಿಕೊಟ್ಟದ್ದೇ ಡಾ. ಬಿ.ಆರ್. ಅಂಬೇಡ್ಕರ್ ಎಂದಿದ್ದಾರೆ.

ಅಂಬೇಡ್ಕರ್ ಕೇವಲ ಸಂವಿಧಾನ ತಜ್ಞರಲ್ಲದೆ, ದೇಶದ ಆರ್ಥಿಕ ವ್ಯವಸ್ಥೆಗೆ, ನೀರಾವರಿ ವ್ಯವಸ್ಥೆಗೆ, ಸಾಮಾಜಿಕ ವ್ಯವಸ್ಥೆಗೆ ಹೊಸ ರೂಪ ನೀಡಿರುವ ತಜ್ಞ ಎಂದು ಹೇಳಬಹುದು. ಆರ್‌ಬಿಐ ಸ್ಥಾಪನೆಯಲ್ಲಿ, ಇರಾಕುಡ್-ಬಾಕ್ರಾ ನಂಗಲ್ ಯೋಜನೆಗಳ ಸ್ಥಾಪನೆಯಲ್ಲಿ ಅಂಬೇಡ್ಕರ್ ಅವರ ಪಾತ್ರವಿದೆ ಎಂಬುದನ್ನು ನಾವು ಮರೆಯುವಂತಿಲ್ಲ. ಸ್ವಾತಂತ್ರ್ಯದ ಸಂದರ್ಭದಲ್ಲಿ ಭಾರತದಲ್ಲಿದ್ದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಯೋಚಿಸಿದ ಒಬ್ಬರೇ ವ್ಯಕ್ತಿ ಎಂದರೆ ಅದು ಅಂಬೇಡ್ಕರ್ ಎಂದು ಅವರು ಅಭಿಪ್ರಾಯಪಟ್ಟರು.

ಪತ್ರಕರ್ತರಾಗಿಯೂ ಅಂಬೇಡ್ಕರ್ ಭಾರತ ದೇಶದ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ತೋರಿಸಿದರು. ಅವರು ಸ್ವತಃ ಐದು ಪತ್ರಿಕೆಗಳನ್ನು ನಡೆಸುತ್ತಿದ್ದರು. ಗಾಂಧೀಜಿ 6 ಪತ್ರಿಕೆಗಳನ್ನು ನಡೆಸುತ್ತಿದ್ದರೆ, ಅಂಬೇಡ್ಕರ್ 5 ಪತ್ರಿಕೆಗಳನ್ನು ನಡೆಸುತ್ತಿದ್ದರು. ತಮ್ಮ ಅಂಕಣಗಳ ಮೂಲಕ ದೇಶವನ್ನು ತಿದ್ದುವ ಕೆಲಸವನ್ನು ಅವರು ಮಾಡಿದ್ದರು. ಜತೆಗೆ, ಬಹುಭಾಷಾ ಪಾಂಡಿತ್ಯ ಹೊಂದಿದ್ದ ಅಂಬೇಡ್ಕರ್ ಜೀವನ ಎಂದಿಗೂ ಆದರ್ಶನೀಯ. ಅವರು ಇಡೀ ದೇಶದ ವ್ಯವಸ್ಥೆಗೆ ನೀಡಿದ ಚಿಕಿತ್ಸೆಯ ಕುರಿತು ವೀರಯ್ಯ ಅವರು ರಾಷ್ಟ್ರಚಿಕಿತ್ಸಕ ಎಂಬ ಪುಸ್ತಕ ಹೊರತಂದಿದ್ದು, ಅದು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.


Share It

You cannot copy content of this page