ಸುದ್ದಿ

ಡಿ ಎಸ್ ವೀರಯ್ಯರ ರಾಷ್ಟ್ರ ಚಿಕಿತ್ಸಕ ಪುಸ್ತಕ ದೇಶದ ಎಲ್ಲ ಭಾಷೆಗೂ ತರ್ಜಿಮೆಯಾಗಲಿ: ಕೇರಳ ಮತ್ತು ತಮಿಳುನಾಡು ರಾಜ್ಯಪಾಲ ಆರ್ಲೇಕರ್ 

Share It

ಬೆಂಗಳೂರು: ಅಂಬೇಡ್ಕರ್ ಅವರ ಕುರಿತು ಅನೇಕ ಪುಸ್ತಕಗಳು ಬಂದಿವೆ. ಆದರೆ, ಭಾರತದಂತಹ ಜಾತಿಪೀಡಕ ರಾಷ್ಟ್ರಕ್ಕೆ ಸಾಮಾಜಿಕ ಮದ್ದು ನೀಡಿದ ಚಿಕಿತ್ಸಕ ಎಂಬರ್ಥದಲ್ಲಿ ಮೂಡಿಬಂದಿರುವ ಡಿ ಎಸ್ ವೀರಯ್ಯ ಅವರ ಕೃತಿ ಎಲ್ಲ ಭಾಷೆಗೆ ತರ್ಜಿಮೆಯಾಗಬೇಕು ಎಂದು ಕೇರಳ ಮತ್ತು ತಮಿಳುನಾಡು ರಾಜ್ಯಪಾಲ ವಿಶ್ವನಾಥ್ ರಾಜೇಂದ್ರ ಆರ್ಲೇಕರ್ ಅಭಿಪ್ರಾಯಪಟ್ಟರು. 

ಅವರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಡಿ ಎಸ್ ವೀರಯ್ಯ ಅವರ ರಾಷ್ಟ್ರ ಚಿಕಿತ್ಸಕ ಅಂಬೇಡ್ಕರ್ ಎಂಬ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಅನೇಕ ಸಮಸ್ಯೆಗಳಿಂದ ನರಳುತ್ತಿತ್ತು. ಇಂತಹ ದೇಶಕ್ಕೆ ಯಾವ ರೀತಿಯ ಮಾಡು ಕೊಡಬೇಕು ಎಂಬುದು ಅಂಬೇಡ್ಕರ್ ಅವರನ್ನು ಹೊರತುಪಡಿಸಿ ಮತ್ಯಾರಿಗೂ ಗೊತ್ತಿರಲಿಲ್ಲ. ಭಾರತ ಸಮಾಜಕ್ಕೆ ಸಂವಿಧಾನದ ಮೂಲಕ ಚಿಕಿತ್ಸೆ ನೀಡಿದ ರಾಷ್ಟ್ರ ಚಿಕಿತ್ಸಕ ಅಂಬೇಡ್ಕರ್ ಎಂದು ಅಭಿಪ್ರಾಯಪಟ್ಟರು. 

ಅಂಬೇಡ್ಕರ್ ಅವರ ಕುರಿತು ಅನೇಕ ಕೃತಿಗಳು ಬಂದಿವೆ. ಆದರೆ, ಅವರು ದೇಶಕ್ಕೆ ನೀಡಿದ ಚಿಕಿತ್ಸೆಯೇನು? ದೇಶದ ಸಮಸ್ಯೆಗಳಿಗೆ ಅವರು ನೀಡಿದ ಸಂವಿಧಾನಾತ್ಮಕ ಪರಿಹಾರಗಳೇನು ಎಂಬುದನ್ನು ಕಂಡುಹಿಡಿದು, ಅಧ್ಯಯನ ಮಾಡಿ ಡಿ ಎಸ್ ವೀರಯ್ಯ ರಾಷ್ಟ್ರ ಚಿಕಿತ್ಸಕ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿ ಈಗ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಬಿಡುಗಡೆಯಾಗಿದೆ. ಇದು ದೇಶದ ಎಲ್ಲ ಭಾಷೆಗಳಲ್ಲಿ ಬಿಡುಗಡೆಯಾದರೆ, ಈ ರಾಷ್ಟ್ರಕ್ಕೆ ಅನುಕೂಲವಾಗುತ್ತದೆ ಎಂದರು.

ಅಂಬೇಡ್ಕರ್ ಅವರ ವಿಚಾರಗಳನ್ನು ಎಲ್ಲರು ಅರ್ಥೈಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಇಲ್ಲಿ ನೆರೆದಿರುವ ಸಮೂಹ ನನಗೆ ಒಂದು ಮಾತು ಕೊಡಬೇಕು. ನಾವೆಲ್ಲರೂ ಮುಂದಿನ ಒಂದು ವರ್ಷದಲ್ಲಿ ಅಂಬೇಡ್ಕರ್ ಅವರ ಚರಿತ್ರೆಯನ್ನು ಓದುತ್ತೇವೆ ಎಂದು, ಅವರ ವಿಚಾರಗಳನ್ನು ಓದಿ ಅರ್ಥೈಸಿಕೊಂಡಾಗ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಕೇವಲ ಅವರು ಬರೆದ ಸಂವಿಧಾನದ ಪ್ರತಿ ಹಿಡಿದುಕೊಂಡು ತಿರುಗಾಡುವುದರಿಂದ ಯಾವುದೇ ಪ್ರಯೋಜನವಿಲ್ಲ, ಸಂವಿಧಾನ ನಮ್ಮ ಮನದಲ್ಲಿರಬೇಕು ಎಂದು ಕರೆ ನೀಡಿದರು. 

ಅಂಬೇಡ್ಕರ್ ಹಿಂದೂ ಧರ್ಮದ ಸುಧಾರಕ: ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ಅಲ್ಲೆಗಳೆಯಲಿಲ್ಲ, ಅಲ್ಲಿರುವ ಹುಳುಕುಗಳನ್ನು ತೋರಿ ಅದನ್ನು ಸುಧಾರಿಸುವ ಪ್ರಯತ್ನ ಮಾಡಿದರು. ಅವರು ವಿದೇಶದಲ್ಲಿ ಪದವಿ ಪಡೆದು ಬಂದಾಗ ಅನುಭವಿಸಿದ ನೋವು ಅವರನ್ನು ಕಾಡಿದ್ದು ಸುಳ್ಳಲ್ಲ, ಕಾಲ ರಾಮನ ಗುಡಿಗೆ ಪ್ರವೇಶ ನೀಡದಿದ್ದಾಗ ಅವರಿಗಾದ ನೋವು ಅಷ್ಟಿಷ್ಟಲ್ಲ, ಇದನ್ನು ಕಂಡು ಹಿಂದೂ ಅಮಾಜವನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿದರು. ಹೀಗಾಗಿ ಅವರನ್ನು ಹಿಂದೂ ಧರ್ಮದ ಟೀಕಾಕಾರ ಎಂದು ಬಿಂಬಿಸುವ ಬದಲು ಅವರೊಬ್ಬ ಸುಧಾರಕ ಎಂದು ನೋಡಬೇಕಾಗಿದೆ ಎಂದರು. 

ಅಂಬೇಡ್ಕರ್ ಅವರಿಂದ ಭಾರತ ರತ್ನದ ಘನತೆ ಹೆಚ್ಚಾಯ್ತು: ಇಂತಹ ಮಹಾನ್ ಚೇತನಕ್ಕೆ ಭಾರತ ರತ್ನ ಕೊಡಲು ೫೦ ವರ್ಷ ಬೇಕಾಯ್ತು. ಅವರನ್ನು ಚುನಾವಣೆಯಲ್ಲಿ ಸೋಲಿಸಲಾಯ್ತು, ಇದು ನಮ್ಮ ದೇಶದ ದುರಂತ. ಅವರಿಗೆ ಭಾರತ ರತ್ನ ನೀಡಿದ್ದರಿಂದ ಅವರಿಗೆ ಘನತೆ ಬರಲಿಲ್ಲ, ಭಾರತ ರತ್ನ ಪ್ರಶಸ್ತಿಗೆ ಅನಂತರವೇ ಒಂದು ಘನತೆ ಬಂತು ಎಂದು ಅಭಿಪ್ರಾಯಪಟ್ಟರು. 

ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗು ಸಾಹಿತಿ ಡಿ ಎಸ್ ವೀರಯ್ಯ ಅವರ ರಾಷ್ಟ್ರ ಚಿಕಿತ್ಸಕ ಅಂಬೇಡ್ಕರ್ ಎಂಬ ಇಂಗ್ಲಿಷ್ ಮತ್ತು ಕನ್ನಡ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಚಿಂತಕ ಮಲ್ಲೆಪುರ ಜಿ ವೆಂಕಟೇಶ್ ಹಾಗು ಇತರೆ ಗಣ್ಯರು ಭಾಗವಹಿಸಿದ್ದರು. 

ಕಾರ್ಯಕ್ರಮದಲ್ಲಿ ಡಿ ಎಸ್ ವೀರಯ್ಯ ಅವರ ಸಾಹಿತ್ಯದ ಕುರಿತು ಅವಲೋಕನ ನಡೆಸಲಾಯಿತು. ದಿನ ದಲಿತರ ಏಳಿಗೆಗೆ ದುಡಿದ ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು. 


Share It

You cannot copy content of this page