ಚಿತ್ರದುರ್ಗ: ಲಾರಿ ಹಾಗೂ ಕಾರಿನ ನಡುವೆ ಅಪಘಾತ ಆಗಿದೆ. ಅಪಘಾತದಲ್ಲಿ ಮೂರು ಜನ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಕೆಆರ್ ಹಳ್ಳಿ (ಕಸ್ತೂರಿ ರಂಗಪ್ಪನಹಳ್ಳಿ) ಗೇಟ್ ಬಳಿ ನಡೆದಿದೆ. ಶಶಿಧರ್ (22),ಮಂಜುನಾಥ್ (22), ಬಸವರಾಜ್ (21) ಮೃತರು. ಮೃತರೆಲ್ಲ ಕೊಪ್ಪಳ ಜಿಲ್ಲೆಯ ಮೂಲದವರೆಂದು ಗುರುತಿಸಲಾಗಿದೆ.
ಮೊದಲಿಗೆ ಲಾರಿಯ ಟೈರ್ ಬರ್ಸ್ಟ್ ಆಗಿ ಲಾರಿ ದಿಢೀರ್ ಎಡಕ್ಕೆ ತಿರುಗಿದೆ. ಈ ವೇಳೆ ಎಡಕ್ಕೆ ತಿರುಗಿದ ಲಾರಿಗೆ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಈ ಪರಿಣಾಮ ಕಾರು ಚಾಲಕ ಸೇರಿ ಒಟ್ಟು ಮೂವರು ಮೃತಪಟ್ಟಿದ್ದಾರೆ. ಇನ್ನು ಈ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಹಿರಿಯೂರು ತಾಲೂಕಿನ ಕಸ್ತೂರಿ ರಂಗಪ್ಪನಹಳ್ಳಿ ಬಳಿ ಮಂಗಳವಾರ ಸಂಜೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ಶಶಿಧರ್ (22), ಕುಷ್ಟಗಿ ತಾಲೂಕಿನ ಮಡಿಕೇರಿ ಗ್ರಾಮದ ಮಂಜುನಾಥ್ (22) ಹಾಗೂ ನಿಡಸೇಸಿ ಗ್ರಾಮದ ಬಸವರಾಜ್ (21) ಮೃತರು ಎಂದು ಗುರುತಿಸಲಾಗಿದೆ.
ನಿಡಸೇಸಿ ಗ್ರಾಮದ ಹನುಮೇಶ್ (22) ಹಾಗೂ ಪ್ರವೀಣ್ ಸೆಡಿಸೇಸಿ (20) ಗಾಯಗೊಂಡಿದ್ದಾರೆ. ಗಾಯಳುಗಳನ್ನು ಹಿರಿಯೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಮೃತರಾದವರು ಮತ್ತು ಗಾಯಗೊಂಡಿರುವವರು ಸೇರಿ ಐವರು ಸ್ನೇಹಿತರು ಬೆಂಗಳೂರಿನಿಂದ ಕುಷ್ಟಗಿ ಪಟ್ಟಣಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಲಾರಿಯ ಟೈರ್ ಬರ್ಸ್ಟ್ ಆಗಿ ಅದು ದಿಢೀರ್ ಎಡಕ್ಕೆ ತಿರುಗಿದಾಗ, ಹಿಂಬದಿಯಿಂದ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಮಾಹಿತಿ ತಿಳಿದ ತಕ್ಷಣ ಹಿರಿಯೂರು ಉಪವಿಭಾಗದ ಡಿವೈಎಸ್ಪಿ ಗೋಪಾಲಕೃಷ್ಣ ಹಾಗೂ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಕೆ.ಎನ್. ಚಂದ್ರಶೇಖರ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ, ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಘಟನೆಗೆ ಸಂಬಂಧಪಟ್ಟಂತೆ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
