ಬೆಂಗಳೂರು: ರಚಿತಾ ರಾಮ್ ಪ್ರತಿ ವರ್ಷ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ತಾರೆ. ಆದರೆ, ಅವರ ಈ ವರ್ಷದ ಹುಟ್ಟು ಹಬ್ಬದ ಆಚರಣೆ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಇದು ರಾಜಕೀಯ ಸೇರುವ ಸುಳಿವ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ನಟಿ ರಚಿತಾ ರಾಮ್ ಹುಟ್ಟು ಹಬ್ಬಕ್ಕೆ ಊರು ತುಂಬ ಕಟ್ ಔಟ್ ಗಳು ರಾಜಾಜಿಸುತ್ತಿವೆ. ರಾಜರಾಜೇಶ್ವರಿ ನಗರದ ತುಂಬೆಲ್ಲಾ ರಚಿತಾಗೆ ಶುಭ ಕೋರುವ ಬ್ಯಾನರ್ ಗಳು ಕಂಗೊಳಿಸುತ್ತಿವೆ. ಇದು ಅವರನ್ನು ಬಿಜೆಪಿ ತನ್ನ ಮುಂದಿನ ಅಭ್ಯರ್ಥಿ ಎಂದು ಘೋಷಿಸಲು ಮಾಡುತ್ತಿರುವ ಸ್ಟಂಟ್ ಎನ್ನುತ್ತಿವೆ ರಾಜಕೀಯ ಮೂಲಗಳು. ಬಿಜೆಪಿ ಜತೆಗೆ ಈಗಾಗಲೇ ಒಳ್ಳೆಯ ನಂಟು ಹೊಂದಿರುವ ರಚಿತಾ ರಾಮ್ ಮುಂದಿನ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರದ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗುತ್ತಿದೆ.
ಶಾಸಕ ಮುನಿರತ್ನ ಬಿಜೆಪಿಗೆ ಬೇಡವಾಗುತ್ತಿದ್ದಾರೆ. ಕಾಂಗ್ರೆಸ್ ಕೂಸುಗಳಾದ ಮುನಿರತ್ನ ಸಹಚರರೆಲ್ಲ ಈಗಾಗಲೇ ಬಿಜೆಪಿ ಪಕ್ಷದ ಕಸದ ಬುಟ್ಟಿ ಸೇರಿದ್ದಾರೆ. ಇದೀಗ ಮುನಿರತ್ನ ಅವರನ್ನು ಸೈಡ್ಲೈನ್ ಮಾಡಲು ಬಿಜೆಪಿ ಚಿಂತನೆ ನಡೆಸಿದೆ. ಅವರ ಮೇಲಿನ ಜಾತಿ ದೌರ್ಜನ್ಯ ಪ್ರಕರಣ, ಅತ್ಯಾಚಾರ ಪ್ರಕರಣ ಮುಂದಿಟ್ಟುಕೊಂಡು ಚುನಾವಣೆ ನಡೆಸುವುದು ಸುಲಭವಲ್ಲ. ಹೀಗಾಗಿ, ಮುನಿರತ್ನ ಬದಲಿಗೆ ರಚಿತಾ ರಾಮ್ ಬಿಜೆಪಿ ಅಭ್ಯರ್ಥಿಯಾಗುವುದು ಸೂಕ್ತ ಎಂಬುದು ರಾಜ್ಯ ಬಿಜೆಪಿ ನಾಯಕರ ಆಶಯವಾಗಿದೆ.
ಮುನಿರತ್ನ ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ವಯಕ್ತಿಕ ಟೀಕೆಗೆ ಇಳಿದು ತಮ್ಮ ವರ್ಚಸ್ಸು ಡ್ಯಾಮೇಜ್ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಪ್ರಬಲ ಪೈಪೋಟಿ ನೋಡಿದ್ದ ಕುಸುಮಾ ಈ ಸಲ ಮುನಿರತ್ನ ವಿರುದ್ಧ ಸುಲಭದಲ್ಲಿ ಗೆಲ್ಲುತ್ತಾರೆ ಎಂಬ ಮಾತಿದೆ. ಇದರ ಬದಲು ಮಹಿಳೆಯನ್ನೇ ಕುಸುಮಾ ವಿರುದ್ಧ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವುದು ಬಿಜೆಪಿ ಮಾಸ್ಟರ್ ಪ್ಲಾನ್ ಆಗಿದೆ. ಇದಕ್ಕೆ ರಚಿತಾ ರಾಮ್ ಸ್ಟಾರ್ ವ್ಯಾಲ್ಯೂ ಬಳಸಿಕೊಳ್ಳಲು ಚಿಂತನೆ ನಡೆದಿದೆ.
ಮುನಿರತ್ನಗೆ ಮುನ್ಸೂಚನೆ ಸಿಕ್ಕಿದೆಯಾ? : ಈ ನಡುವೆ ಮುನಿರತ್ನಗೂ ತಮ್ಮ ಭವಿಷ್ಯದ ಮುನ್ಸೂಚನೆ ಸಿಕ್ಕಿರುವಂತೆ ಕಾಣುತ್ತಿದೆ. ಬಿಜೆಪಿಯಲ್ಲಿದ್ದರು ಆಗಾಗ ಡಿಕೆ ಶಿವಕುಮಾರ್ ಬಗ್ಗೆ ಸಾಫ್ಟ್ ಆಗಿ ಮಾತನಾಡಿ, ಅವರ ಪ್ರೀತಿ ಗಳಿಸಲು ಪ್ರಯತ್ನಿಸಿದ್ದ ಮುನಿರತ್ನ ತನ್ನ ಕೆಟ್ಟ ಚಾಳಿಯಿಂದ ಕಾಂಗ್ರೆಸ್ ನಿಂದ ದೂರಾಗಿದ್ದಾರೆ. ಬಿಜೆಪಿ ಟಿಕೆಟ್ ಕೊಡುವುದು ಅನುಮಾನವಾಗಿದೆ. ಹೀಗಾಗಿ, ಮುನಿರತ್ನ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಅವರನ್ನು ಹೊಗಳಿ ಹೊನ್ನ ಶೂಲಕ್ಕೇರಿಸುವ ಉಮೇದಿಗೆ ತೊಡಗಿದ್ದಾರೆ. ಆ ಮೂಲಕ ತಮಗೆ ಟಿಕೆಟ್ ಕೈತಪ್ಪುವ ಮುನ್ಸೂಚನೆ ಸಿಕ್ಕಿರುವುದನ್ನು ಒಪ್ಪಿಕೊಂಡಿದ್ದಾರೆ. ಹೇಗಾದರೂ ಆಗಲಿ ಎಂದು ಜೆಡಿಎಸ್ ಪಡಸಾಲೆಯಲ್ಲಿಯೂ ಒಂದು ಟವೆಲ್ ಹಾಕುವ ಪ್ರಯತ್ನ ಮಾಡಿದ್ದಾರೆ.
ರಚಿತಾ ರಾಮ್ ಗಿದೆ ಸ್ಟಾರ್ ವ್ಯಾಲ್ಯೂ: ರಚಿತಾ ರಾಮ್ ದರ್ಶನ್ ಜೈಲು ಸೇರಿದ ನಂತರ ಲೇಡಿ ಸೂಪರ್ ಸ್ಟಾರ್ ಆಗುವ ಪ್ರಯತ್ನ ನಡೆಸಿದ್ದಾರೆ. ದರ್ಶನ ಅಭಿಮಾನಿಗಳ ಫುಲ್ ಸಪೋರ್ಟ್ ಅವರಿಗೆ ಸಿಗುತ್ತಿದೆ. ಜತೆಗೆ ಸಿನಿಮಾ ಅವಕಾಶಗಳು ಕಡಿಮೆಯಾಗುತ್ತಿವೆ. ಇನ್ನು ಬಿಜೆಪಿ ರಾಜ್ಯದ ಹಿರಿಯ ನಾಯಕರ ಕೃಪಾಕಟಾಕ್ಷ ಅವರ ಮೇಲಿದೆ. ಜತೆಗೆ ಕ್ಷೇತ್ರದಲ್ಲಿ ಒಳ್ಳೆಯ ಫ್ಯಾನ್ ಬೇಸ್ ಇದೆ. ಇದೆಲ್ಲದರ ಜತೆಗೆ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿದ ಒಕ್ಕಲಿಗ ಸಮುದಾಯವನ್ನು ಅವರು ಪ್ರತಿನಿಧಿಸುತ್ತಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಅವರನ್ನು ರಾಜರಾಜೇಶ್ವರಿ ನಗರದ ಅಭ್ಯರ್ಥಿಯಾಗಿಸಲು ಈಗಿನಿಂದಲೇ ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
