ಅಹಮದಾಬಾದ್: ಬಿಜೆಪಿ ಶಾಸಕನೊಬ್ಬ ತನ್ನ ಮನೆಯ ಮೇಲಿನ ಧೂಳು ಸ್ವಚ್ಛಗೊಳಿಸಲು ಅಗ್ನಿಶಾಮಕ ದಳದ ವಾಹನ ಬಳಸಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಾಕವಾಗಿ ವೈರಲ್ ಆಗಿದೆ.
ತುರ್ತು ಸಂದರ್ಭದಲ್ಲಿ ಬೆಂಕಿ ನಂದಿಸಲು ಬಳಸುವ ಅಗ್ನಿಶಾಮಕ ವಾಹನವನ್ನು ಶಾಸಕ ತನ್ನ ಮನೆಯನ್ನು ಸ್ವಚ್ಛಗೊಳಿಸಲು ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಾಸಕರ ನಡೆಯ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.
ಆ ವಿಡಿಯೋ ರಾಷ್ಟ್ರಮಟ್ಟದ ಸುದ್ದಿಯಾಗಿದ್ದು, ಬಿಜೆಪಿ ಶಾಸಕನ ವರ್ತನೆಗೆ ಸಾರ್ವಜನಿಕರು, ನೆಟ್ಟಿಗರು ಮತ್ತು ಕೆಲ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವ್ಯಾಪಕ ಆಕ್ರೋಶದ ನಂತರ ಅಗ್ನಿಶಾಮಕ ದಳಕ್ಕೆ ಶಾಸಕರು 2700 ರು. ದಂಡವನ್ನು ಕಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಸುದ್ದಿಯನ್ನು ನೆಟ್ಟಿಗರು ಆಕ್ರೋಶದಿಂದಲೇ ಹಂಚಿಕೊಂಡಿದ್ದಾರೆ.
ಜನಪ್ರತಿನಿಧಿಗಳು ಸಾರ್ವಜನಿಕ ಹಣವನ್ನು ಹೇಗೆ ಪೋಳು ಮಾಡುತ್ತಾರೆ. ಅವರು ಮಾಡುವ ತಪ್ಪಿಗೆ ಎಷ್ಟು ಸಣ್ಣ ಪ್ರಮಾಣದ ಶಿಕ್ಷೆಯಾಗುತ್ತದೆ. ಅದೇ ಸಾಮಾನ್ಯ ಜನರು ಇಂತಹ ತಪ್ಪುಗಳನ್ನು ಮಾಡಿದರೆ, ಅವರ ಮೇಲಾಗುವ ಕ್ರಮಗಳೇನು ಎಂಬ ಬಗ್ಗೆಯೆಲ್ಲ ನೆಟ್ಟಿಗರು ಬಿಸಿಬಿಸಿ ಚರ್ಚೆ ನಡೆಸಿದ್ದಾರೆ. ಸರಕಾರ, ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
