ರಾಜಕೀಯ ಸುದ್ದಿ

ಭೀಮಣ್ಣ ಖಂಡ್ರೆಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ: ರಂಭಾಪುರಿ ಶ್ರೀಗಳು

Share It

ಚಿಕ್ಕಮಗಳೂರು : ಸ್ವಾತಂತ್ರ್ಯ ಸೇನಾನಿ, ಏಕೀಕರಣದ ಹೋರಾಟಗಾರಾಗಿದ್ದ ಲಿಂಗೈಕ್ಯ ಡಾ. ಭೀಮಣ್ಣ ಖಂಡ್ರೆ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ವೀರಶೈವ ಲಿಂಗಾಯತ ಮಹಾಸಭಾ ಚಿಕ್ಕಮಗಳೂರು ಘಟಕ ಕೈಗೊಂಡಿರುವ ನಿರ್ಣಯಕ್ಕೆ ರಂಭಾಪುರಿ ಜಗದ್ಗುರುಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿಂದು ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಕಲ್ಯಾಣ ಕರ್ನಾಟಕದ ಕಣ್ಮಣಿಯಾಗಿದ್ದ ಭೀಮಣ್ಣ ಖಂಡ್ರೆ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದರೆ ಅದು ಅವರು ಮಾಡಿದ ಮಹತ್ಕಾರ್ಯಕ್ಕೆ ಬೆಂಬಲ ನೀಡಿದಂತಾಗುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡು ತಾವು ನೋವುಂಡು, ಸಮಾಜಕ್ಕೆ ಒಳಿತನ್ನೇ ಮಾಡಿದ ಭೀಮಣ್ಣ ಖಂಡ್ರೆ ಅವರಿಗೆ ಮುಂದಿನ ದಿನಗಳಲ್ಲಿ ಕರ್ನಾಟಕ ರತ್ನ ಗೌರವ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಮಹಾಸಭಾ, ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ.ಲೋಕೇಶ್, ಶತಾಯುಷಿ, ಲೋಕನಾಯಕ ಲಿಂಗೈಕ್ಯ ಡಾ. ಭೀಮಣ್ಣ ಖಂಡ್ರೆ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಗುವುದು ಎಂದು ತಿಳಿಸಿದರು.

ಭೀಮಣ್ಣ ಖಂಡ್ರೆ ಅವರು ನಮ್ಮ ಸಮಾಜದ ಮೇರು ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಅವರು, ವಕೀಲರಾಗಿ ನೊಂದ ಸಾವಿರಾರು ಬಡ ಜನರಿಗೆ ನ್ಯಾಯ ಕೊಡಿಸಿದ್ದರು. ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ ಹೈದ್ರಾಬಾದ್ ಕರ್ನಾಟಕದಲ್ಲಿ ರಜಾಕಾರರ ದಬ್ಬಾಳಿಕೆಯ ನಡುವೆಯೂ ಕನ್ನಡ ಜೀವಂತವಾಗಿ ಉಳಿಯಲು ಶ್ರಮಿಸಿದ್ದರು. ಜೊತೆಗೆ ಬಸವ ಕಲ್ಯಾಣದಲ್ಲಿ ಈಗಿರುವ ಆಧುನಿಕ ಅನುಭವ ಮಂಟಪ ನಿರ್ಮಾಣದಲ್ಲಿ ಭಾಲ್ಕಿ ಹಿರೇಮಠದ ಚನ್ನಬಸವ ಪಟ್ಟದ್ದೇವರೊಂದಿಗೆ ಹೆಗಲಿಗೆ ಹೆಗಲುಕೊಟ್ಟು ಶ್ರಮಿಸಿದ್ದರು. ಇಂತಹ ಕನ್ನಡ ಕಟ್ಟಾಳುವಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಬೇಕು ಎಂದು ಸಭಾ ಒತ್ತಾಯಿಸುತ್ತದೆ ಎಂದರು. ಸಭೆಯಲ್ಲಿ ನೆರೆದಿದ್ದ ಎಲ್ಲರೂ ಈ ನಿರ್ಣಯವನ್ನು ಒಕ್ಕೊರಲಿನಿಂದ ಅನುಮೋದಿಸಿದರು.


Share It

You cannot copy content of this page