ಅಪರಾಧ ಸುದ್ದಿ

ಮೈಸೂರು: ವಿದ್ಯಾರ್ಥಿನಿಯನ್ನು ತಬ್ಬಿಕೊಂಡು ಬೆಂಕಿ ಹಚ್ಚಿಕೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವು

Share It

ಮೈಸೂರು: ಪೆಟ್ರೋಲ್​​​​ ಸುರಿದುಕೊಂಡು ವಿದ್ಯಾರ್ಥಿನಿಯನ್ನು ತಬ್ಬಿಕೊಂಡು, ಸುಟ್ಟಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ ಮೃತಪಟ್ಟಿದ್ದಾನೆ.

ಮಳವಳ್ಳಿ ತಾಲೂಕಿನ ಅಲಗೂಡು ಗ್ರಾಮದ ಸತೀಶ್ ಎಂಬುವವರ ಮಗ ಚಂದನ್ (27) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಯುವಕ. ತನ್ನ ಊರಿನಲ್ಲಿ ಕೃಷಿ ಚಟುವಟಿಕೆ ಮಾಡಿಕೊಂಡಿದ್ದ ಈತ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಈಕೆ ಮೈಸೂರಿನಲ್ಲಿ ದ್ವಿತೀಯ ವರ್ಷದ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದಳು.

ಸೆ.29ರ ಮಂಗಳವಾರ ಬೆಳಗ್ಗೆ ಯುವತಿಯು ಹಾಸ್ಟೆಲ್​ನಿಂದ ಕಾಲೇಜಿಗೆ ಹೋಗುವಾಗ ಕರೆ ಮಾಡಿ ಭೇಟಿಯಾಗಬೇಕೆಂದು ಹೇಳಿದ್ದಾನೆ. ಈ ವೇಳೆಯಲ್ಲಿ ಯುವತಿ ಈಗ ನಾನು ಕಾಲೇಜಿಗೆ ತೆರಳುತ್ತಿದ್ದು, ಭೇಟಿ ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾಳೆ. ಆದರೆ, ಆತ ಕೆಲ ಸಮಯದಲ್ಲಿ ಕಾರಿನಲ್ಲಿ ಅದೇ ರಸ್ತೆಗೆ ಬಂದಿದ್ದಾನೆ. ಅಲ್ಲಿ ಯುವತಿಗೆ ಎದುರಾದ ಆತ ಮತ್ತೆ ಪ್ರೀತಿಸುವಂತೆ ಪೀಡಿಸಿದ್ದ. ಇದರಿಂದ ರೊಚ್ಚಿಗೆದ್ದ ಯುವತಿ ಪ್ರೀತಿ ನಿರಾಕರಿಸಿ ಕಾಲೇಜಿಗೆ ಹೋರಟಳು. ಇದರಿಂದ ಕೋಪಗೊಂಡ ಚಂದನ್ ಈಕೆ ಮೇಲೆ ಏಕಾಏಕಿ ಪೆಟ್ರೋಲ್ ಸುರಿದು, ತಾನೂ ಪೆಟ್ರೋಲ್ ಸುರಿದುಕೊಂಡು ಆಕೆಯನ್ನು ತಬ್ಬಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.

ಈ ಘಟನೆಯಿಂದ ಶೇ.80ರಷ್ಟು ಸುಟ್ಟುಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸತೀಶ್​ನನ್ನು ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 8 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ ಯುವಕ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆ ನಂತರ ಬುಧವಾರ ಮಧ್ಯಾಹ್ನ ಯುವಕನ ಮೃತದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಲಾಯಿತು. ಶೇ.20 ರಷ್ಟು ಸುಟ್ಟ ಗಾಯಗಳಿಂದ ಗಾಯಗೊಂಡಿದ್ದ ಯುವತಿ ಚೇತರಿಸಿಕೊಳ್ಳುತ್ತಿದ್ದಾಳೆ. ಯುವತಿಯ ಪೋಷಕರು ನೀಡಿದ ದೂರಿನ ಮೇಲೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


Share It

You cannot copy content of this page