ಅಪರಾಧ ಸುದ್ದಿ

ಗಂಗಾ ನದಿಯಲ್ಲಿ ದೋಣಿ ಮಗುಚಿ ಬಿದ್ದು ಮಕ್ಕಳು ಸೇರಿ 14 ಮಂದಿ ಸಾವು, ಹಲವರು ನಾಪತ್ತೆ

Share It

ಪಾಟ್ನಾ(ಬಿಹಾರ): ಬಿಹಾರದ ವೈಶಾಲಿ ಜಿಲ್ಲೆಯ ರಘೋಪುರ ಬಳಿ ಗಂಗಾ ನದಿಯಲ್ಲಿ ಮಂಗಳವಾರ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಮಕ್ಕಳು ಸೇರಿ ಕನಿಷ್ಠ 14 ಮಂದಿ ಮೃತಪಟ್ಟಿದ್ದು, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ರಘೋಪುರ ಪೊಲೀಸ್ ಠಾಣಾ ವ್ಯಾಪ್ತಿಯ ರಾಂಪುರ ಶ್ಯಾಮ್‌ಚಂದ್ ಗ್ರಾಮದ ಬಳಿ ಈ ಘಟನೆ ನಡೆದಿದೆ. ಜನರ ಗುಂಪೊಂದು ದೋಣಿಯಲ್ಲಿ ಸಮೀಪದ ಗ್ರಾಮವೊಂದಕ್ಕೆ ಔತಣಕೂಟದಲ್ಲಿ ಭಾಗವಹಿಸಲು ತೆರಳಿದ್ದು, ವಾಪಸಾಗುವಾಗ ದೋಣಿ ಮಗುಚಿ ಬಿದ್ದಿದೆ. ಇತ್ತೀಚಿನ ಮಳೆ ಮತ್ತು ನದಿಯ ಉಪನದಿಯಾದ ಗಂಡಕ್‌ನಲ್ಲಿ ಉಂಟಾದ ಪ್ರವಾಹದ ಕಾರಣದಿಂದಾಗಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲವು ಗ್ರಾಮಸ್ಥರು ಈಜಿ ಸುರಕ್ಷಿತ ಸ್ಥಳ ತಲುಪಿದರಾದರೂ, ಇತರರು ದುರದೃಷ್ಟವಶಾತ್ ಪ್ರಾಣ ಕಳೆದುಕೊಂಡರು ಎಂದು ವರದಿಯಾಗಿದೆ. ವೈಶಾಲಿ ಜಿಲ್ಲಾಧಿಕಾರಿ ವರ್ಷಾ ಸಿಂಗ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶುಭಾಂಕ್ ಮಿಶ್ರಾ ಅವರು ಸ್ಥಳದಲ್ಲಿದ್ದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು.

4 ಲಕ್ಷ ರೂಪಾಯಿ ಪರಿಹಾರ: ರಕ್ಷಿಸಲ್ಪಟ್ಟವರಲ್ಲಿ ಕೆಲವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಹೇಳಲಾಗಿದ್ದು, ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ದುರ್ಘಟನೆ ಮತ್ತು ಸಂಭವಿಸಿದ ಸಾವುಗಳ ಬಗ್ಗೆ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬದವರಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಅವರು ಘೋಷಿಸಿದ್ದಾರೆ.

“ವೈಶಾಲಿಯ ರಘುಪುರದಲ್ಲಿ ನಡೆದ ದೋಣಿ ದುರಂತದಲ್ಲಿ ಅಮಾಯಕ ಜೀವಗಳು ಬಲಿಯಾಗಿರುವ ಸುದ್ದಿ ಅತ್ಯಂತ ದುಃಖಕರ ಮತ್ತು ಮನಕಲಕುವಂತಿದೆ. ಈ ಕಠಿಣ ಸಮಯದಲ್ಲಿ ಮೃತರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪಗಳು. ದೇವರು ಮೃತರ ಆತ್ಮಗಳಿಗೆ ಶಾಂತಿ ನೀಡಲಿ ಮತ್ತು ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ಆ ಕುಟುಂಬಗಳಿಗೆ ಕರುಣಿಸಲಿ” ಎಂದು ಸಿಎಂ ಸಾಮ್ರಾಟ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.


Share It

You cannot copy content of this page