ರಾಜಕೀಯ ಸುದ್ದಿ

ಟಿಬಿ ಡ್ಯಾಂಗೆ ತಾತ್ಕಾಲಿಕ ಗೇಟ್ ಅಳವಡಿಕೆ ಬಹುತೇಕ ಯಶಸ್ವಿ!

Share It

ಹೊಸಪೇಟೆ : ಇಲ್ಲಿಂದ ಸಮೀಪದ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿಯ ತುಂಗಭದ್ರಾ ಜಲಾಶಯದಲ್ಲಿ ಮುರಿದುಹೋದ 19ನೇ ಗೇಟ್‌ನಿಂದ ಹೊರಗೆ ವ್ಯರ್ಥವಾಗಿ ಹರಿಯುತ್ತಿದ್ದ ಜಲರಾಶಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ತಜ್ಞರ ತಂಡ ಕೊನೆಗೂ ಸಫಲವಾಗಿದೆ. ಟಿ.ಬಿ ಡ್ಯಾಂನಲ್ಲಿ ಕಳೆದ 3 ದಿನಗಳಿಂದ ನಡೆಯುತ್ತಿದ್ದ ಈ ಕಾರ್ಯಾಚರಣೆಗೆ ಯಶಸ್ಸು ದೊರೆತಿದ್ದು, ಪೋಲಾಗಲಿದ್ದ ನೀರನ್ನು ಉಳಿಸುವಲ್ಲಿ ತಜ್ಞ ಕನ್ನಯ್ಯ ನಾಯ್ಡು ತಂಡ ಯಶಸ್ವಿಯಾಗಿದೆ.

ಟಿ.ಬಿ ಡ್ಯಾಂ ಕ್ರಸ್ಟ್ ಗೇಟ್‌ಗೆ 3 ಸ್ಟಾಪ್ ಲಾಗ್ ಅಳವಡಿಸಿದ್ದರಿಂದಾಗಿ ಹೊರ ಹರಿಯುವ ನೀರನ್ನು ನಿಲ್ಲಿಸಲಾಗಿದೆ.

ಕ್ರಸ್ಟ್‌ ಗೇಟ್ ನಂ.19ನೇ ಗೇಟ್‌ ಸುರಕ್ಷಿತವಾದ ಪರಿಣಾಮ, ಡ್ಯಾಂನಿಂದ ನೀರು ಹೊರಬಿಡಲಾಗಿದ್ದ ಎಲ್ಲಾ 33 ಗೇಟ್‌ಗಳನ್ನು ಮುಚ್ಚಿ ಆ ಮೂಲಕ ಪೋಲಾಗುತ್ತಿದ್ದ ನೀರನ್ನು ಟಿಬಿ ಡ್ಯಾಂ ಮಂಡಳಿ ತಡೆದಿದೆ.

ಚೈನ್ ಲಿಂಕ್ ಕಟ್ ಆಗಿ ಮುರಿದುಬಿದ್ದಿದ್ದ ಕ್ರಸ್ಟ್ ಗೇಟ್ ನಂ.19 ನ್ನು ಕೂಡಿಸಲು 3 ದಿನಗಳಿಂದ ತಜ್ಞರ ತಂಡ ಪ್ರಯತ್ನಿಸುತ್ತಿತ್ತು. ನಿನ್ನೆ ರಾತ್ರಿ ಮೊದಲ ಸ್ಟಾಪ್ ಲಾಗ್ ಗೇಟ್‌ನ ಮೊದಲ ಎಲಿಮೆಂಟ್ ಕೂಡಿಸುವಲ್ಲಿ ಯಶಸ್ವಿಯಾಗಿತ್ತು. ಬೆಳಗ್ಗಿನಿಂದ ಇನ್ನೆರಡು ಎಲಿಮೆಂಟ್‌ಗಳನ್ನು ಕನ್ನಯ್ಯ ನಾಯ್ಡು ನೇತೃತ್ವದ ತಜ್ಞರ ತಂಡ ಕೂರಿಸಿದೆ.

ಇದರಿಂದ 70 ಟಿಎಂಸಿಯಷ್ಟು ನೀರು ಉಳಿಸಲು ಟಿಬಿ ಬೋರ್ಡ್ ಯಶಸ್ವಿಯಾಗಿದೆ. ಡ್ಯಾಂನಲ್ಲಿ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಇದುವರೆಗೆ ಪೋಲಾದ ನೀರು ಮತ್ತೆ ತುಂಬಿಕೊಳ್ಳುವ ವಿಶ್ವಾಸ ಮೂಡಿದೆ. ಸದ್ಯ ಡ್ಯಾಂಗೆ 41 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನಿನ್ನೆ 80 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿತ್ತು.

ಆದರೆ ಟಿ.ಬಿ ಡ್ಯಾಂನ ಗರಿಷ್ಠ ಮಟ್ಟ 105 ಅಡಿಗಳಿಗೂ ಹೆಚ್ಚಿದೆ. ಆದರೆ ಆಗಸ್ಟ್ 10, ಶನಿವಾರ ರಾತ್ರಿ 10:50 ರ ಸುಮಾರಿಗೆ ಟಿ.ಬಿ ಡ್ಯಾಂನ ಕ್ರಸ್ಟ್‌ ಗೇಟ್ ನಂ.19 ಕಟ್ ಆಗಿ ಭಾರಿ ಪ್ರಮಾಣದ ನೀರು ಸೋರಿಕೆಯಾಗಲು ಶುರುವಾಯಿತು. ಈಗಾಗಲೇ ಡ್ಯಾಂನ ಸುಮಾರು 35 ಟಿಎಂಸಿ ನೀರು ವ್ಯರ್ಥವಾಗಿ ಹರಿದುಹೋಗಿದೆ. ಹೀಗಾಗಿ ಕೇವಲ 70 ಟಿಎಂಸಿ ನೀರನ್ನು ಮಾತ್ರ ಟಿ.ಬಿ ಡ್ಯಾಂ ಹೊಂದಿದೆ.


Share It

You cannot copy content of this page