ಅಪರಾಧ ಸುದ್ದಿ

ಅರಬೈಲ್ ಘಾಟ್ ರಸ್ತೆ ಅಪಘಾತ: ಧಾರವಾಡ ಮೂಲದ ಆರು ಸ್ವಿಗ್ಗಿ ಡೆಲಿವರಿ ಬಾಯ್ಸ್ ಸಾವು

Share It

ಕಾರವಾರ(ಉತ್ತರ ಕನ್ನಡ): ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್‌ನ ಬಳಗಾರ್ ಬಳಿ ಲಾರಿ ಹಾಗೂ ತೂಫಾನ್ ಕಮರ್ಷಿಯಲ್ ವಾಹನದ ನಡುವೆ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಜನರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ​

ಮೃತರೆಲ್ಲರೂ ಧಾರವಾಡ ಮೂಲದವರಾಗಿದ್ದು, ಹುಬ್ಬಳ್ಳಿ-ಧಾರವಾಡದಲ್ಲಿ ‘ಸ್ವಿಗ್ಗಿ’ (Swiggy) ಸಂಸ್ಥೆಯಲ್ಲಿ ಪಾರ್ಟ್ ಟೈಮ್ ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಧಾರವಾಡದಿಂದ ರಾತ್ರಿ ವೇಳೆ ಧರ್ಮಸ್ಥಳ ಹಾಗೂ ಮಂಗಳೂರು ಕಡೆಗೆ ಪ್ರವಾಸ ಹೊರಟಿದ್ದಾಗ ದುರಂತ ಸಂಭವಿಸಿದೆ. ತೂಫಾನ್ ವಾಹನದಲ್ಲಿ ಚಾಲಕ ಸೇರಿ ಒಟ್ಟು 9 ಜನರಿದ್ದರು.

ಅರಬೈಲ್ ಘಾಟ್‌ನ ಬಳಗಾರ್ ತಲುಪುತ್ತಿದ್ದಂತೆ ತೂಫಾನ್ ವಾಹನ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೂಫಾನ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ತೂಫಾನ್ ವಾಹನದಲ್ಲಿದ್ದ 6 ಜನ ದುರ್ಮರಣಕ್ಕೀಡಾಗಿದ್ದಾರೆ. ಮೃತರನ್ನು ​ಬಸವರಾಜ್ (48 ವರ್ಷ), ​ಅಭಿಷೇಕ್ ಈಶ್ವರ್ (28 ವರ್ಷ), ​ಅಕ್ಷಯ (26 ವರ್ಷ), ​ಅಭಿಷೇಕ್ (26 ವರ್ಷ), ​ಸಂಜೀವ/ಸಂಜಯ ಅಂಗಡಿ (33 ವರ್ಷ), ​ಮಂಜುನಾಥ ಚುಲಕಿ (32 ವರ್ಷ) ಎಂದು ಗುರುತಿಸಲಾಗಿದೆ.

​​ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಶಿವರಾಜ್ ದುರ್ಗಪ್ಪ ಮಡಿವಾಳ್ (22 ವರ್ಷ), ​ಸಚಿನ್, ​ಚೆನ್ನಬಸಯ್ಯ ಬಸಲಿಂಗಯ್ಯ ಸಂಪಗಾವ (28 ವರ್ಷ) ಸೇರಿ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ​ಘಟನಾ ಸ್ಥಳಕ್ಕೆ ಯಲ್ಲಾಪುರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share It

You cannot copy content of this page