ಅಪರಾಧ ಸುದ್ದಿ

ರಸ್ತೆ ಬದಿ ಮಲಗಿದ್ದವರ ಮೇಲೆ ಕಲ್ಲು ಎತ್ತಿ ಹಾಕ್ತಿದ್ದ ಸೈಕೋ

Share It

ಬೆಂಗಳೂರು: ಇವನದ್ದೊಂದು ವಿಚಿತ್ರ ಗುಣ ಸ್ವಭಾವ, ಅದೇನು ಸೈಕೋ ಮನಸ್ಥಿತಿಯೋ, ಏನೋ ಒಂದೇ ವಾರದಲ್ಲಿ ರಸ್ತೆ ಬದಿ ಮಲಗಿದ್ದ ಇಬ್ಬರ ಮೇಲೆ ಕಲ್ಲು ಎತ್ತಿಹಾಕಿದ್ದ.

ಇಂತಹವನೊಬ್ಬ ಸೈಕೋ ಕೊಲೆಗಾರನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದು, ಮತ್ತಷ್ಟು ಅಮಾಯಕರ ಜೀವವನ್ನು ಉಳಿಸಿದಂತಾಗಿದೆ. ನಟೋರಿಯಸ್ ಕೊಲೆಗಾರ ಗಿರೀಶ್ ಎಂಬಾತನನ್ನು ಬಂಧಿಸಿರುವ ಪೊಲೀಸರು ಆತ ಮತ್ತೆಷ್ಟು ಇಂತಹ ಕೊಲೆ ಮಾಡಿರಬಹುದು ಎಂದು ವಿಚಾರಣೆ ನಡೆಸುತ್ತಿದ್ದಾರೆ.

ಜಯನಗರದ ೭ ನೇ ಹಂತದಲ್ಲಿ ಮೇ ೧೨ ರಂದು ರಸ್ತೆಬದಿಯಲ್ಲಿ ಮದ್ಯ ಸೇವನೆ ಮಾಡಿ ಬಿದ್ದಿದ್ದ ವ್ಯಕ್ತಿಯೊಬ್ಬನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಈ ಬಗ್ಗೆ ತನಿಖೆ ನಡೆಸುತ್ತಿದ್ದರು. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದಾಗ ವ್ಯಕ್ತಿಯೊಬ್ಬ ಆತನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡುತ್ತಿರುವ ಭೀಕರ ದೃಶ್ಯ ಸೆರೆಯಾಗಿತ್ತು.

ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಯ ಪತ್ತೆಗೆ ಬಲೆ ಬೀಸಿದ ಪೊಲೀಸರಿಗೆ ಗಿರೀಶ್ ಬನಶಂಕರಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಈತ ಇದೊಂದೇ ಕೊಲೆಯಲ್ಲದೆ ಮತ್ತೊಂದು ಇದೇ ರೀತಿಯ ಕೊಲೆ ಮಾಡಿರುವುದು ಪ್ರಾಥಮಿಕ ಹಂತದ ತನಿಖೆಯಲ್ಲಿ ಬಯಲಾಗಿದೆ.

ರಸ್ತೆ ಬದಿಯಲ್ಲಿ ಮಲಗಿದ್ದವರನ್ನೇ ಗುರಿಯಾಗಿಸಿಕೊಂಡಿದ್ದ ಈತ ಕಲ್ಲು ಎತ್ತಿ ಹಾಕಿ ಕೊಲೆ ಮಾಡುತ್ತಿದ್ದ ಎನ್ನಲಾಗಿದೆ. ಇದೇ ರೀತಿ ಮತ್ತಷ್ಟು ಕೊಲೆಗಳನ್ನು ಮಾಡಿರಬಹುದು ಎಂಬ ಶಂಕೆಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ರಸ್ತೆ ಬದಿ ಮಲಗಿದ್ದವರನ್ನು ಯಾವ ಕಾರಣಕ್ಕೆ ಟಾರ್ಗೆಟ್ ಮಾಡಿ, ಕೊಲೆ ಮಾಡುತ್ತಿದ್ದ, ಅದರಿಂದ ಆತನಿಗೆ ಅದೇನೂ ಲಾಭವಿತ್ತು. ಅಥವಾ ಇದರೊಂದು ಮಾನಸಿಕ ಅಸ್ವಸ್ಥತೆ ಕಾರಣವಾ ಎಂಬೆಲ್ಲ ವಿಚಾರವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Share It

You cannot copy content of this page