ಬಿರುಗಾಳಿ ಸಹಿತ ಮಳೆಯಿಂದ ಕಾರಿನ ಮೇಲೆ ಮರ ಬಿದ್ದು ಯುವಕ ಸಾವು

188
Share It

ಮಂಡ್ಯ: ಬಿರುಗಾಳಿಸಹಿತ ಸುರಿದ ಮಳೆಗೆ ಕಾರಿನ ಮರ ಬಿದ್ದು ಯುವಕ ಸ್ಥಳದಲ್ಲೇ ಅಸುನೀಗಿದ ಅವಘಡ ಮಂಡ್ಯದಲ್ಲಿ ನಡೆದಿದೆ.

ಸೋಮವಾರ ರಾತ್ರಿ ಮಂಡ್ಯ ನಗರದ ಆಸ್ಪತ್ರೆ ರಸ್ತೆಯಲ್ಲಿ ನಡೆದ ದುರಂತದಲ್ಲಿ ಮಂಡ್ಯ ತಾಲೂಕಿನ ಜಿ.ಬೊಮ್ಮನಹಳ್ಳಿ ಗ್ರಾಮದ ರಾಮಯ್ಯನ ಪುತ್ರ ಕಾರ್ತಿಕ್ (28) ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್, ಇವರ ಜೊತೆ ಕಾರಿನಲ್ಲಿದ್ದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.

ಇಂದು ಮಂಗಳವಾರ ಕಾರ್ತಿಕ್ ಅವರ ಹುಟ್ಟುಹಬ್ಬವಿದ್ದ ಹಿನ್ನೆಲೆಯಲ್ಲಿ ಸ್ನೇಹಿತರಾದ ಸುನೀಲ್ ಮತ್ತು ಚೇರನಹಳ್ಳಿ ಮಂಜು ಅವರೊಂದಿಗೆ ಮಂಡ್ಯ ನಗರಕ್ಕೆ ಓಮ್ನಿ ಕಾರಿನಲ್ಲಿ ಬಟ್ಟೆ ಖರೀದಿಸಲು ಬಂದಿದ್ದರು. ಸೋಮವಾರ ರಾತ್ರಿ 8 ಗಂಟೆಯ ಸುಮಾರಿಗೆ ಗಾಳಿಸಮೇತ ಮಳೆ ಆರಂಭಗೊಂಡಿದ್ದು, ಆಸ್ಪತ್ರೆ ರಸ್ತೆಯ ತಿರುವಿನಲ್ಲಿ ಮರ ಕಾರಿನ ಮೇಲೆ ಬಿದ್ದಿದೆ. ತಕ್ಷಣ ಸಾರ್ವಜನಿಕರು ರಕ್ಷಣೆಗೆ ಮುಂದಾಗಿದ್ದರು. ಆದರೆ ನಜ್ಜುಗುಜ್ಜಾಗಿದ್ದ ಕಾರಿನಲ್ಲಿ ಸಿಲುಕಿದ್ದ ಕಾರ್ತಿಕ್ ಸಾವನ್ನಪ್ಪಿದ್ದು, ಇನ್ನಿಬ್ಬರು ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಪೂರ್ವ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮಿಮ್ಸ್ ಶವಾಗಾರಕ್ಕೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವಕ ಸಾವನ್ನಪ್ಪಿರುವುದಕ್ಕೆ ಅರಣ್ಯ ಇಲಾಖೆ ಮತ್ತು ನಗರಸಭೆ ಹೊಣೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯ ನಗರ ಪ್ರದೇಶದ ಹಲವು ರಸ್ತೆಗಳಲ್ಲಿ ಮರಗಳನ್ನು ಬೆಳೆಸಲಾಗಿದೆ.

ಆದರೆ ಅದರ ನಿರ್ವಹಣೆಯನ್ನು ಇಲಾಖೆ ಸಮರ್ಪಕವಾಗಿ ಮಾಡುತ್ತಿಲ್ಲ. ಬೇರು ಗಟ್ಟಿ ಇಲ್ಲದ ಮರಗಳನ್ನು ಹಾಗೆಯೇ ಬಿಟ್ಟಿದ್ದು, ಗಾಳಿ ಮಳೆಗೆ ಧರೆಗುರುಳುತ್ತಿವೆ. ದೊಡ್ಡ ಗಾತ್ರದ ಮರಗಳ ಕೊಂಬೆಗಳು ರಸ್ತೆಗಳಿಗೆ ಚಾಚಿಕೊಂಡಿವೆ. ಅದೇ ರೀತಿ ಒಣಗಿದ ಕೊಂಬೆಗಳನ್ನು ಹಾಗೆಯೇ ಬಿಡಲಾಗಿದೆ. ಅರಣ್ಯ ಇಲಾಖೆ ಜೊತೆಗೆ ನಗರಸಭೆ ಬೇಜವಾಬ್ದಾರಿ ತೋರುತ್ತಿರುವುದರಿಂದ ಜೀವ ಬಲಿಯಾಗಿದೆ ಎಂದು ಕಿಡಿಕಾರಿದರು.


Share It

You cannot copy content of this page