ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕುರಿತ ಸಂತ್ರಸ್ತೆಯೊಬ್ಬರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಮತ್ತೇ ನಾಲ್ವರನ್ನು ಬಂಧಿಸಿದ್ದು, ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.
ಕೆ.ಆರ್. ನಗರದ ಮಹಿಳೆಯನ್ನ ಅಪಹರಣ ಮಾಡಲಾಗಿದೆ ಎಂದು ಆಕೆಯ ಪುತ್ರ ನೀಡಿದ ದೂರಿನ ಆಧಾರದಲ್ಲಿ ಈಗಾಗಲೇ ಜೆಡಿಎಸ್ ಶಾಸಕ, ಮಾಜಿ ಸಚಿವ ಎಚ್. ಡಿ. ರೇವಣ್ಣ ಹಾಗೂ ಆಪ್ತ ಸಹಾಯಕ ಸತೀಶ್ ಬಾಬು ಅವರನ್ನು ಬಂಧಿಸಿದ್ದಾರೆ. ಜೆಡಿಎಸ್ ಮುಖಂಡರು ಎನ್ನಲಾದ ಸುಜಯ್, ಕೀರ್ತಿ ತಿಮ್ಮಪ್ಪ ಹಾಗೂ ಮನು ಎಂಬುವರನ್ನು ಇದೀಗ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಈ ಮೇಲಿನ ಎಲ್ಲರೂ ಮಹಿಳೆಯನ್ನ ಅಪಹರಿಸಿದ ಆರೋಪದಲ್ಲಿ ಬಂಧಿತರಾಗಿರುವ ಸತೀಶ್ ಬಾಬು ಜೊತೆ ಸಂಪರ್ಕದಲ್ಲಿದ್ದರು. ಅಲ್ಲದೆ ಕಿಡ್ನ್ಯಾಪ್‌ಗೆ ಸಹಕರಿಸಿದ್ದರು ಎಂಬ ಅಪಾದನೆ ಮೇರೆಗೆ ನಾಲ್ವರನ್ನ ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಆರೋಪ ಮೇಲ್ನೋಟಕ್ಕೆ ಸಾಬೀತಾದರೆ ಬಂಧಿಸುವ ಸಾಧ್ಯತೆಯಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ , ಈಗಾಗಲೇ ಶಾಸಕ ಹಾಗೂ ಮಾಜಿ ಸಚಿವ ಹೆಚ್. ಡಿ. ರೇವಣ್ಣ ಅವರನ್ನು ಬಂಧಿಸಲಾಗಿದ್ದು, ನಾಲ್ಕು ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಲಾಗಿತ್ತು. ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಬುಧವಾರ ಅವರನ್ನು 17 ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರಕುಮಾರ್ ಬಿ. ಕಟ್ಟಿಮನಿ ಅವರ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಮೇ 14 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿತ್ತು. ಇದೀಗ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.