ಬಾಗಲಕೋಟೆ: ಹಿಂದೂ ಯುವಕನೊಬ್ಬ ತಾನು ಪ್ರೀತಿಸಿದ ಮುಸ್ಲಿಂ ಸಮುದಾಯದ ಯುವತಿಯನ್ನು ಮದುವೆಯಾದುದ್ದನ್ನು ವಿರೋಧಿ ಹಿಂದೂಪರ ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆ ಕಲ್ಲು ತೂರಾಟ, ದಾಂಧಲೆ ನಡೆಸಿದ್ದು, ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಮೂಲಕ ಮಾಂತೇಶ್ ಮತ್ತು ರುಬೀನಾ ಮದುವೆಯಾದ ಜೋಡಿಯಾಗಿದ್ದು, ಇವರು ಮದುವೆಯ ಬಳಿಕ ನಗರದ ಎಸ್.ಪಿ.ಕಚೇರಿಗೆ ಬಂದು ತಮಗೆ ರಕ್ಷಣೆ ಕೊಡುವಂತೆ ಕೋರಿಕೊಂಡಿದ್ದರು. ಮದುವೆಯ ವಿಷಯ ತಿಳಿದ ಯುವತಿಯ ಪೋಷಕರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಕೂಡ ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದರು.
ಯುವತಿ ಮತ್ತು ಯುವಕ ವಯಸ್ಕರಾಗಿದ್ದು, ಮದುವೆಗೆ ಅಡ್ಡಿ ಮಾಡುವ ಅಧಿಕಾರ ಯಾರಿಗೂ ಇಲ್ಲ. ಯುವತಿಯ ಹೇಳಿಕೆ ಪಡೆದು, ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಮಾತಿನಿಂದ ರೊಚ್ಚಿಗೆದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆ ವೇಳೆ ಪೊಲೀಸರು ಲಾಠಿಚಾರ್ಜ್ ಮೂಲಕ ಗುಂಪನ್ನು ಚದುರಿಸಿದ್ದಾರೆ.