ಬೆಂಗಳೂರು: ಸಿಗರೇಟ್ ಚಟ ಕೆಲವರನ್ನು ಎಷ್ಟು ಕಾಡುತ್ತದೆಯೆಂದರೆ, ಅವರೆಲ್ಲಿದ್ದರೂ ಸಿಗರೇಟ್ ಸೇದಲೇಬೇಕು ಎಂಬ ಹಠಕ್ಕೆ ಬಿದ್ದು ಒದ್ದಾಡುತ್ತಾರೆ. ಇಲ್ಲೊಬ್ಬ ವ್ಯಕ್ತಿ ವಿಮಾನದಲ್ಲಿದ್ದರೂ ತನ್ನ ಚಟ ಬಿಡಲಾರದೆ ಪೊಲೀಸರ ಅತಿಥಿಯಾಗಿದ್ದಾನೆ.
ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿಯೇ ಸಿಗರೇಟ್ ಸೇದುವ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದ ಆರೋಪದಡಿ ಮೊಹಮ್ಮದ್ ಅಸ್ಲಾಂ ಎಂಬಾತನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.
ದುಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ ಮೊಹಮ್ಮದ್ ಅಸ್ಲಾಂ ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಸೇದುತ್ತಿದ್ದ, ಹೊಗೆ ನೀಡಿದ ಸಿಬ್ಬಂದಿ, ಆರೋಪಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ವಿಮಾನ ಇಳಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಆರೋಪಿಯನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ, ಆತನನ್ನು ಠಾಣೆಗೆ ಒಪ್ಪಿಸಿದ್ದು, ಆತನ ಮೇಲೆ ದೂರು ದಾಖಲು ಮಾಡಿದ್ದಾರೆ.