ಬೆಂಗಳೂರು: ಪ್ರತಿ ವರ್ಷ ಮೊದಲ ಸ್ಥಾನ ಪಡೆದುಕೊಳ್ಳುತ್ತಿದ್ದ ಕರಾವಳಿ ಜಿಲ್ಲೆಗಳು, ಮರಳಿ ತಮ್ಮ ಮೊದಲ ಸ್ಥಾನಕ್ಕೆ ಬರುವ ಮೂಲಕ ಟೀಕೆಗಳಿಗೆಲ್ಲ ಉತ್ತರ ನೀಡಿದಂತಾಗಿದೆ.
ಪ್ರತಿ ವರ್ಷವೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಟಾಪ್ ಸ್ಥಾನದಲ್ಲಿರುತ್ತಿದ್ದವು. ಆದರೆ, ಕಳೆದ ಬಾರಿ ಫಲಿತಾಂಶದಲ್ಲಿ ಉಡುಪಿ ೧೪ ಮತ್ತು ದಕ್ಷಿಣ ಕನ್ನಡ ಜಿಲ್ಲೆ ೧೭ನೇ ಸ್ಥಾನದಲ್ಲಿತ್ತು. ಚಿತ್ರದುರ್ಗ ಮೊದಲ ಸ್ಥಾನ ಪಡೆದುಕೊಂಡಿತ್ತು.
ಈ ಸಲ ಚಿತ್ರದುರ್ಗ ೨೧ ನೇ ಸ್ಥಾನಕ್ಕೆ ಕುಸಿದಿದೆ. ಈ ಬಾರಿಯ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ಶೇ.೯೪ ಫಲಿತಾಂಶ ಪಡೆದು ಪ್ರಥಮ ಸ್ಥಾನದಲ್ಲಿದ್ದು, ದಕ್ಷಿಣ ಕನ್ನಡ ಜಿಲ್ಲೆ ಶೇ.೯೨.೧೨ ಫಲಿತಾಂಶ ಪಡೆದು ದ್ವಿತೀಯ ಸ್ಥಾನದಲ್ಲಿದೆ. ಕೆಲವು ವರ್ಷಗಳ ಹಿಂದೆ ಪರೀಕ್ಷಾ ಫಲಿತಾಂಶದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ ಪಡೆಯುತ್ತಿದ್ದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಇತ್ತೀಚಿನ ವರ್ಷಗಳಲ್ಲಿ ಆ ರೀತಿಯ ಸಾಧನೆ ಕಂಡುಬರುತ್ತಿರಲಿಲ್ಲ.
ಪಿಯುಸಿ ಫಲಿತಾಂಶದಲ್ಲಿ ಪ್ರಥಮ, ದ್ವಿತೀಯ ಸ್ಥಾನವನ್ನು ಉಳಿಸಿಕೊಳ್ಳುತ್ತಿರುವ ಕರಾವಳಿ ಜಿಲ್ಲೆಗಳು ಎಸ್‌ಎಸ್‌ಎಲ್‌ಸಿಯಲ್ಲೂ ಪ್ರಥಮ, ದ್ವಿತೀಯ ಸ್ಥಾನ ಪಡೆದುಕೊಂಡಿವೆ.