ಹುಬ್ಬಳ್ಳಿ: ಪ್ರೀತಿಸುತ್ತಿದ್ದ ಹುಡುಗಿ ಫೋನ್ ಬ್ಲಾಕ್‌ಲಿಸ್ಟ್ಗೆ ಹಾಕಿದ ಕಾರಣಕ್ಕೆ ಸಿಟ್ಟಿಗೆದ್ದ ಆರೋಪಿ ವಿಶ್ವ ಅಂಜಲಿ ಕೊಲೆಗೆ ಸ್ಕೆಚ್ ಹಾಕಿದ್ದ ಎಂಬುದು ಬಹಿರಂಗವಾಗಿದೆ.
ಹುಬ್ಬಳ್ಳಿಯಲ್ಲಿ ಕೇವಲ ಎರಡು ವಾರದ ಅಂತರದಲ್ಲಿ ಎರಡನೇ ಯುವತಿಯ ಕೊಲೆಯಾಗಿದೆ. ಇದನ್ನು ಗಂಭಿರವಾಗಿ ಪರಿಗಣಿಸಿದ್ದ ಪೊಲೀಸರು, ಆರೋಪಿಯನ್ನು ದಾವಣಗೆರೆಯಲ್ಲಿ ಬಂಧಿಸಿದ್ದಾರೆ. ಬಂಧನದ ನಂತರ ಕೊಲೆಗೆ ಇರುವ ಮತ್ತೊಂದು ಆಯಾಮ ಬಹಿರಂಗವಾಗುತ್ತಿದ್ದು, ಕುಟುಂಬಸ್ಥರು ಹೇಳಿದಂತೆ ಪ್ರಕರಣದಲ್ಲಿ ಯಾವ ಘಟನೆಗಳು ನಡೆದಿಲ್ಲ ಎನ್ನಲಾಗುತ್ತಿದೆ.
ಅಂಜಲಿ ಮತ್ತು ಆರೋಪಿ ವಿಶ್ವ ಆಲಿಯಾಸ್ ಗಿರೀಶ್ ಪರಸ್ಪರ ಪ್ರೀತಿ ಮಾಡುತ್ತಿದ್ದರು. ವಿಶ್ವ ಮೈಸೂರಿನ ಮಹಾರಾಜ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಆಗಾಗ ಆಕೆಯ ಖರ್ಚಿಗೂ ಹಣ ಕಳುಹಿಸುತ್ತಿದ್ದ ಎನ್ನಲಾಗಿದೆ. ಕೊನೆಯ ಬಾರಿ ಆಕೆ ಎರಡು ಸಾವಿರ ಹಣ ಕೇಳಿದ್ದಳು, ಆತ ಒಂದು ಸಾವಿರ ರು. ಫೋನ್ ಪೇ ಮೂಲಕ ಹಣ ಕಳುಹಿಸಿದ್ದ. ಅನಂತರ ಆಕೆ ಆತನ ನಂಬರ್ ಬ್ಲಾಕ್‌ಲಿಸ್ಟ್ ಗೆ ಹಾಕಿದ್ದಳು.
ಯುವತಿ ತನ್ನ ಪೋನ್ ಪದೇಪದೆ ಮಾಡಿದರೂ ತೆಗೆಯದಿದ್ದಕ್ಕೆ ಕೋಪಗೊಂಡ ವಿಶ್ವ, ತನ್ನ ಕ್ರಿಮಿನಲ್ ಹಿನ್ನೆಲೆಯ ಕೆಲವು ಯುವಕರ ಸಲಹೆ ಕೇಳಿದ್ದ, ಅನಂತರ ಅವರ ಸಲಹೆ ಮೇರೆಗೆ ಆಕೆಗೆ ಬುದ್ದಿ ಕಲಿಸಲು ತೀರ್ಮಾನಿಸಿದ್ದ ಆತ ಮೈಸೂರಿನಲ್ಲಿ ರೈಲಿನಲ್ಲಿ ಹುಬ್ಬಳ್ಳಿಗೆ ಬಂದು, ಅನಂತರ ಒಂದು ಆಟೋ ಬಾಡಿಗೆಗೆ ಪಡೆದು, ಯುವತಿಯ ಮನೆ ಬಳಿಗೆ ಬೆಳ್ಳಂಬೆಳಗ್ಗೆಯೇ ಬಂದಿದ್ದ.
ಯುವತಿಯನ್ನು ಮನೆಯಿಂದ ಆಚೆಗೆ ಕರೆದ ಆತ, ಆಕೆಯೊಂದಿಗೆ ಜಗಳವಾಡುತ್ತಲೇ, ತನ್ನ ಬಳಿಯಿದ್ದ ಚಾಕುವಿನಿಂದ ಮನಬಂದAತೆ ಇರಿದು ಕೊಲೆ ಮಾಡಿದ್ದಾನೆ. ಅನಂತರ ಅದೇ ಆಟೋದಲ್ಲಿ ರೈಲು ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ಮತ್ತೇ ಮೈಸೂರಿಗೆ ಹೋಗಿದ್ದ ಎನ್ನಲಾಗಿದೆ. ಆದರೆ, ಮನಸ್ಸು ಒಪ್ಪದೆ ವಾಪಸ್ ಹುಬ್ಬಳ್ಳಿಗೆ ಬರುತ್ತಿದ್ದ ಎಂದು ಹೇಳಲಾಗಿದೆ.
ರೈಲಿನಲ್ಲಿ ಕಿರಿಕ್: ಬಂಧನಕ್ಕೆ ಕಾರಣವಾಯ್ತು ! ಆರೋಪಿ ವಿಶ್ವ ಪೊಲೀಸರಿಂದ ತಪ್ಪಿಸಿಕೊಳ್ಳಲು ಯೋಜನೆ ರೂಪಿಸಿದ್ದ. ಮೈಸೂರಿನ ಕೆಲಸ ಬಿಟ್ಟು, ಮಹಾರಾಷ್ಟç ಅಥವಾ ಆಂಧ್ರದಲ್ಲಿ ಕೆಲಸ ಹುಡುಕಿಕೊಳ್ಳಲು ತೀರ್ಮಾನಿಸಿದ್ದ. ಹೀಗಾಗಿ, ರೈಲಿನ ಮೂಲಕ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ವಾಪಸ್ ಹುಬ್ಬಳ್ಳಿಗೆ ಬರುತ್ತಿದೆ. ಈ ವೇಳೆ ತುಮಕೂರಿನ ಮಹಿಳೆಯೊಬ್ಬರ ಜತೆ ಕಿರಿಕ್ ಮಾಡಿಕೊಂಡಿದ್ದಾನೆ. ಆಕೆಯನ್ನು ಹೆದರಿಸಲು ಚಾಕು ತೋರಿಸಿದ್ದಾನೆ. ಇದರಿಂದ ಕೋಪಗೊಂಡ ಪ್ರಯಾಣಿಕರು ಆತನನ್ನು ಥಳಿಸಿದ್ದಾರೆ. ಪೊಲೀಸರಿಗೆ ಹಿಡಿದುಕೊಡುವ ಮಾತುಗಳನ್ನಾಡಿದ್ದಾರೆ. ಆಗ ಏಕಾಏಕಿ ರೈಲಿನಿಂದ ಜಿಗಿದು ಪರಾರಿಯಾಗಲು ಯತ್ನಿಸಿ, ಬಿದ್ದು ಗಾಯಗೊಂಡಿದ್ದಾನೆ.
ಆಸ್ಪತ್ರೆ ಸಿಬ್ಬಂದಿಯ ದಾರಿ ತಪ್ಪಿಸಿದ್ದ ಆರೋಪಿ: ಮಾಯಕೊಂಡ ರೈಲ್ವೆ ನಿಲ್ದಾಣದಲ್ಲಿ ಬಿದ್ದು ಗಾಯಗೊಂಡಿದ್ದ ಆರೋಪಿ ವಿಶ್ವನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಆತ ಮೈಸೂರಿನಿಂದ ಬರುತ್ತಿರುವುದಾಗಿ, ತಾನು ಕೆಲಸ ಮಾಡುತ್ತಿರುವ ಜಾಗವನ್ನೆಲ್ಲ ಹೇಳಿದ್ದ. ಊರಿಗೆ ಹೋಗುತ್ತಿರುವುದಾಗಿ ತಿಳಿಸಿದ್ದ. ಆದರೆ, ಆತನ ಮೇಲೆ ಅನುಮಾನ ಬಂದು ಪ್ರಶ್ನೆ ಮಾಡಿದಾಗ, ಆತನೆ ಹುಬ್ಬಳ್ಳಿ ಯುವತಿ ಅಂಜಲಿ ಕೊಲೆ ಆರೋಪಿ ಎಂಬುದು ಗೊತ್ತಾಗಿದೆ. ಆನಂತರ ರೈಲ್ವೆ ಪೊಲೀಸರು, ಹುಬ್ಬಳ್ಳಿ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ.