ಬೆಂಗಳೂರು: ಎಸ್‌ಐಟಿ ಮುಂದೆ ಶರಣಾಗದೆ, ಆಟ ಆಡಿಸುತ್ತಿರುವ ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸರ ಮುಂದೆ ಶರಣಾಗುವಂತೆ ಹೇಳಿ, ಇಲ್ಲವಾದಲ್ಲಿ ಕಾನೂನು ಪ್ರಕ್ರಿಯೆ ಕಷ್ಟವಾಗಬಹುದು ಎಂದು ವಕೀಲರ ತಂಡ ಪ್ರಜ್ವಲ್ ಕುಟುಂಬ ಸದಸ್ಯರಿಗೆ ಸಲಹೆ ನೀಡಿದೆ ಎನ್ನಲಾಗಿದೆ.
ಪೆನ್ ಡ್ರೈವ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಜ್ವಲ್ ವಿದೇಶಕ್ಕೆ ಹಾರಿದ್ದರು. ಅದು ಯಾರ ಸಲಹೆ ಎಂಬುದು ಮಾತ್ರ ಇನ್ನೂ ನಿಗೂಢ. ಆದರೆ, ವಿದೇಶದಲ್ಲಿದ್ದುಕೊಂಡು, ಪದೇಪದೆ ಟಿಕೆಟ್ ಬುಕ್ ಮಾಡಿ, ಪೊಲೀಸರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಸಹಜವಾಗಿಯೇ ಅಧಿಕಾರಿಗಳ ತಾಳ್ಮೆ ಕೆಡುವಂತೆ ಮಾಡಿದೆ. ಇದೇ ವಿಷಯವನ್ನು ಮುಂದಿಟ್ಟುಕೊAಡು ರೇವಣ್ಣ ಅವರಿಗೆ ಜಾಮೀನು ನೀಡದಂತೆ ಎಸ್‌ಐಟಿ ಪರ ವಕೀಲರು ನ್ಯಾಯಾಲಯವನ್ನು ಮನವಿ ಮಾಡಿಕೊಂಡಿದ್ದರು. ನ್ಯಾಯಾಲಯ ಈ ಅಂಶವನ್ನು ಬಹಳ ಗಂಭೀರವಾಗಿ ಪರಿಗಣಿಸಿತ್ತು.
ಪ್ರಜ್ವಲ್ ಪದೇಪದೆ ಟಿಕೆಟ್ ಕ್ಯಾನ್ಸಲ್ ಮಾಡುತ್ತಿರುವುದು ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಬ್ಲೂ ಕಾರ್ನರ್ ನೊಟೀಸ್ ನೀಡಿಯೂ, ಪೊಲೀಸರನ್ನು ಆಟವಾಡಿಸುತ್ತಿರುವ ಕುರಿತು ಆಕ್ರೋಶ ಹೆಚ್ಚಾಗುತ್ತಿದೆ. ಸಾರ್ವಜನಿಕ ವಲಯದಲ್ಲಿಯೂ ಪ್ರಜ್ವಲ್ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ದುಡ್ಡಿರುವವರ ಇಂತಹ ವರ್ತನೆಯನ್ನು ಪೊಲೀಸರು ಸರಿಯಾಗಿ ಮಟ್ಟಹಾಕಬೇಕು ಎಂಬ ಬೇಡಿಕೆ ಹೆಚ್ಚಾಗುತ್ತಿದೆ.
ಇದೇ ಅಂಶ ನ್ಯಾಯಾಲಯದಲ್ಲಿ ಹಿನ್ನಡೆಯಾಗುತ್ತಿದ್ದು, ಅದನ್ನು ತಪ್ಪಿಸಿಕೊಳ್ಳಲು ಪ್ರಜ್ವಲ್ ಅವರನ್ನು ವಿದೇಶದಿಂದ ಕರೆಸಿಕೊಳ್ಳುವುದೊಂದೇ ದಾರಿ ಎನ್ನಲಾಗಿದೆ. ಎಚ್.ಡಿ.,ರೇವಣ್ಣ ಜಾಮೀನು ಮಂಜೂರು ವೇಳೆ ನ್ಯಾಯಾಲಯ ಪ್ರಜ್ವಲ್ ವಿದೇಶಕ್ಕೆ ಪರಾರಿಯಾಗಿರುವ ಅಂಶವನ್ನು ಬಹುಳ ಸೂಕ್ಷö್ಮವಾಗಿ ಗಮನಿಸಿದೆ. ಇದೇ ಅಂಶದ ಆಧಾರದ ಮೇಲೆ ಎರಡನೇ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಕೊಡುವ ಸ್ಥಿತಿ ನಿರ್ಮಾಣವಾಗಿತ್ತು.
ಆದರೆ, ಕೊನೆಯ ಕ್ಷಣದಲ್ಲಿ ಜಾಮೀನು ಮಂಜೂರಾಗಿದೆ. ಪ್ರಜ್ವಲ್ ಮತ್ತಷ್ಟು ದಿನ ಇದೇ ರೀತಿ ಪೊಲೀಸರನ್ನು ಆಟವಾಡಿಸಿದರೆ, ರೇವಣ್ಣ ಅವರ ಜಾಮೀನು ರದ್ದಾಗುವ ಸಾಧ್ಯತೆ ನಿರ್ಮಾಣವಾಗಬಹುದು. ಹೀಗಾಗಿ, ಅವರನ್ನು ವಿದೇಶದಿಂದ ಕರೆಸಿ, ಶರಣಾಗಲು ಹೇಳಿ, ನಂತರ ಜಾಮೀನು ಪಡೆದು, ಕಾನೂನು ಹೋರಾಟ ನಡೆಸಬಹುದು ಎಂದು ರೇವಣ್ಣ ಕುಟುಂಬಕ್ಕೆ ವಕೀಲರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಮಗನನ್ನು ಕರೆಸುವಂತೆ ದೊಡ್ಡಗೌಡರ ಸಲಹೆ: ಈ ನಡುವೆ ಮಾಜಿ ಸಚಿವ ರೇವಣ್ಣ ಜೈಲಿನಿಂದ ಜಾಮೀನು ಪಡೆದು ಹೊರಬರುತ್ತಿದ್ದಂತೆ, ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಈ ವೇಳೆ ದೊಡ್ಡಗೌಡರು, ಬೇಸರದಿಂದಲೇ, ಆತನನ್ನು ವಿದೇಶದಿಂದ ಕರೆಸಿ, ಶರಣಾಗುವಂತೆ ಹೇಳು ಎಂದು ಖಡಕ್ ಆಗಿ ಹೇಳಿದ್ದಾರೆ ಎನ್ನಲಾಗಿದೆ.
ಮರ‍್ನಾಲ್ಕು ದಶಕದ ತಮ್ಮ ಹೆಸರು, ಇದೊಂದು ಪ್ರಕರಣದಿಂದ ಮಣ್ಣುಪಾಲಾದ ಬಗ್ಗೆ ದೊಡ್ಡಗೌಡರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಪ್ರಜ್ವಲ್ ದೇಶಕ್ಕೆ ಬಂದು ಶರಣಾಗ್ತಾರಾ ಎಂದು ಕಾದು ನೋಡಬೇಕಿದೆ.