ಬೆಂಗಳೂರು, ಏಪ್ರಿಲ್ 25: ಬಿಜೆಪಿ ವಿರುದ್ಧ ಅವಹೇಳನಕಾರಿ ಜಾಹೀರಾತು ನೀಡಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಕ್ಷಮೆಯಾಚಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ ಮಾಡಿದೆ.
ಚೊಂಬು ಜಾಹೀರಾತು ನೀಡುವ ಮೂಲಕವಾಗಿ ಅವಹೇಳನ ಮಾಡಿದ್ದ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಬುಧವಾರ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳಿಗೆ ಬಿಜೆಪಿ ದೂರು ಸಲ್ಲಿಸಿದೆ.
‘ಇದು ಚೊಂಬು’ ಶೀರ್ಷಿಕೆಯೊಂದಿಗೆ ಕಾಂಗ್ರೆಸ್ ಪಕ್ಷವು ಪತ್ರಿಕೆಗಳಿಗೆ ಜಾಹೀರಾತು ನೀಡಿತ್ತು. ಅದರ ಫೋಟೋದೊಂದಿಗೆ ದೂರು ನೀಡಿರುವ ಬಿಜೆಪಿ, ‘ಚೊಂಬು’ ಪದವು ಕನ್ನಡದ ಆಡುಭಾಷೆಯಾಗಿದೆ ಮತ್ತು ಇದನ್ನು ‘ಮೋಸಗೊಳಿಸುವುದು ಅಥವಾ ಖಾಲಿ ಭರವಸೆಗಳನ್ನು’ ನೀಡುವುದನ್ನು ಸೂಚಿಸಲು ಬಳಸಲಾಗುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಿಗಿದೆ.
ಈ ಜಾಹೀರಾತಿನ ಉದ್ದೇಶವು ಕೇಂದ್ರ ಸರ್ಕಾರವು ರಾಜ್ಯಕ್ಕೆ ಮೋಸ ಮಾಡಿದೆ ಎಂಬುದನ್ನು ಬಿಂಬಿಸುವುದಾಗಿದೆ. ಆದರೆ, ಕಾಂಗ್ರೆಸ್ ಈ ಆರೋಪ ಸಂಪೂರ್ಣ ಸುಳ್ಳು ಎಂದು ದೂರಿನಲ್ಲಿ ಬಿಜೆಪಿ ಉಲ್ಲೇಖಿಸಿದೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷ ನೀಡಿದ್ದ ಚೊಂಬು ಜಾಹೀರಾತು ನಂತರ ರಾಜ್ಯದಲ್ಲಿ ಜಾಹೀರಾತು ಸಮರಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ನ ಚೊಂಬು ಜಾಹೀರಾತಿನಿಂದ ಕೆರಳಿದ್ದ ಬಿಜೆಪಿ, 2013ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚೊಂಬು ಹಿಡಿದುಕೊಂಡು ಬಯಲುಶೌಚಕ್ಕೆ ಹೋಗುತ್ತಿರುವ ಮತ್ತು 2023ರಲ್ಲಿ ಚೊಂಬು ಹಿಡಿದುಕೊಂಡು ಶೌಚಾಲಯಕ್ಕೆ ಹೋಗುತ್ತಿರುವ ಎಡಿಟೆಡ್ ಚಿತ್ರವನ್ನು ಟ್ವೀಟ್ ಮಾಡಿ ‘ಇಷ್ಟೇ ವ್ಯತ್ಯಾಸ’ ಎಂದು ವ್ಯಂಗ್ಯವಾಡಿತ್ತು.
ನಂತರ ಉಭಯ ಪಕ್ಷಗಳ ಜಾಹೀರಾತು ಸಮರ ಮುಂದುವರಿದಿದ್ದು, ‘ಕಾಂಗ್ರೆಸ್ ಡೇಂಜರ್’ ಎಂಬ ಜಾಹೀರಾತನ್ನು ಬಿಜೆಪಿ ನೀಡಿತ್ತು. ಬಳಿಕ ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಜನತೆ ಕೈಗೆ ಚಿಪ್ಪು ನೀಡಲಾಗಿದೆ ಎಂದು ಜಾಹೀರಾತು ನೀಡಿತ್ತು. ನಂತರ ಕಾಂಗ್ರೆಸ್ ಪಿಕ್ಪಾಕೆಟ್ ಮಾಡುತ್ತಿದೆ ಎಂದು ಬಿಜೆಪಿ ಪ್ರತಿಯಾಗಿ ಜಾಹೀರಾತು ನೀಡಿತ್ತು.