ನವದೆಹಲಿ: ಹಾರ್ಮುಜ್ ಜಲಸಂಧಿಯ ಮೂಲಕ ತನ್ನ ಹಡಗುಗಳ ಸುರಕ್ಷತೆ ಮತ್ತು ಅವುಗಳ ಸುರಕ್ಷಿತ ನಿರ್ಗಮನಕ್ಕಾಗಿ ಭಾರತ ಸರ್ಕಾರ ಇರಾನಿನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಕುರಿತು ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣದೀರ್ ಜೈಸ್ವಾಲ್, ಪಶ್ಚಿಮ ಏಷ್ಯಾದ ಪರಿಸ್ಥಿತಿ ಹಿನ್ನೆಲೆ ಈ ಮಾರ್ಗದಲ್ಲಿ ಭಾರತೀಯ ಹಡಗುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನವದೆಹಲಿ ಕ್ರಮ ಕೈಗೊಂಡಿರುವ ಕುರಿತು ಅವರು ತಿಳಿಸಿದರು.
ಕಳೆದ 48 ಗಂಟೆಗಳಲ್ಲಿ ಭಾರತದ ಎರಡು ಹಡಗುಗಳಾದ ವಿಎಲ್ಸಿಸಿ ಸಮ್ನಾರ್ ಹೆರಾಲ್ಡ್ ಮತ್ತು ಬಲ್ಕ್ ಕ್ಯಾರಿಯರ್ ಜಗ್ ಅರ್ನವ್ ಹಾರ್ಮುಜ್ ಜಲಸಂಧಿಯನ್ನು ದಾಟುವಾಗ ಈ ಗುಂಡಿನ ದಾಳಿ ನಡೆದಿದೆ. ನಂತರ ಅವು ಸುರಕ್ಷಿತವಾಗಿ ಪರ್ಷಿಯನ್ ಕೊಲ್ಲಿಗೆ ಹಿಂತಿರುಗಿವೆ. ಯಾವುದೇ ಸಿಬ್ಬಂದಿಗೆ ಗಾಯಗಳಾಗಿರುವ ವರದಿಯಾಗಿಲ್ಲ ಎಂದರು.
ಈ ಪ್ರಯತ್ನದಲ್ಲಿ ನಮ್ಮ 10 ಹಡಗುಗಳು ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿವೆ. ಒಂದು ಹಡಗು ಶೀಘ್ರದಲ್ಲೇ ಆಗಮಿಸುತ್ತಿದೆ. ಈ ಬಗ್ಗೆ ನಮ್ಮ ಸಹೋದ್ಯೋಗಿಗಳು ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದರು.
ಶನಿವಾರ ಭಾರತದ ಹಡಗಿನ ಮೇಲೆ ಗುಂಡು ಹಾರಿಸಿದ ಘಟನೆ ವರದಿ ಬೆನ್ನಲ್ಲೇ, ಇರಾನಿನ ರಾಯಭಾರಿಗಳನ್ನು ನಾವು ಕರೆಸಿಕೊಂಡು ಈ ಕುರಿತು ಚರ್ಚೆ ನಡೆಸಲಾಗಿದೆ. ವಿದೇಶಾಂಗ ಕಾರ್ಯದರ್ಶಿಗಳೊಂದಿಗೆ ನಾವು ಸಭೆ ನಡೆಸಿದ್ದೇವೆ. ಈ ಬಗ್ಗೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದೆ. ಭಾರತವು ತನ್ನ ನಾವಿಕರ ಸುರಕ್ಷತೆ ಮತ್ತು ಭದ್ರತೆ ಮತ್ತು ವಾಣಿಜ್ಯ ಸಾಗಣೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ತಿಳಿಸಿದರು.
ಹಾರ್ಮುಜ್ ಜಲಸಂಧಿಯಲ್ಲಿ ಸಂಘರ್ಷ ಆರಂಭವಾದಾಗಿನಿಂದ ಭಾರತದ 10 ಹಡಗುಗಳು ದಾಟಿದ್ದು, 10ನೇ ಹಡಗು ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ್ದಾಗಿದೆ. 31 ಭಾರತೀಯ ನಾವಿಕರೊಂದಿಗೆ ಕಚ್ಚಾ ತೈಲ ಟ್ಯಾಂಕರ್ ದೇಶ್ ಗರಿಮಾ ಎಪ್ರಿಲ್ 18 ರಂದು ಕಾರ್ಯತಂತ್ರದ ಜಲಮಾರ್ಗವನ್ನು ದಾಟಿದ್ದು, ನಾಳೆ (ಎಪ್ರಿಲ್ 22) ಮುಂಬೈ ತಲುಪುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.

