ಬೆಂಗಳೂರು : ಅಧಿಕೃತ ಖರ್ಚು ಭರಿಸಲು ಕಂಪನಿಯು ನೀಡಿದ್ದ ಕ್ರೆಡಿಟ್ ಕಾರ್ಡ್ ಬಳಸಿಕೊಂಡು 27 ಲಕ್ಷ ರೂಪಾಯಿ ದುರ್ಬಳಕೆ ಮಾಡಿಕೊಂಡಿದಲ್ಲದೆ, ಪ್ರಶ್ನಿಸಿದ್ದಕ್ಕೆ ಚೀನಾ ಹಾಗೂ ಪಾಕಿಸ್ತಾನದ ಅನಾಮಧೇಯ ವ್ಯಕ್ತಿಗಳಿಂದ ಬೆದರಿಕೆಗೆ ಒಳಗಾಗಿದ್ದೆ ಎಂದು ಕೃತ್ಯವನ್ನು ಸಮರ್ಥಿಸಿಕೊಂಡಿದ್ದ ಉದ್ಯೋಗಿ ವಿರುದ್ಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ಜಾಪುರ ರಸ್ತೆಯಲ್ಲಿರುವ ಐಟಿ ಕಂಪನಿಯೊಂದರ ಪ್ರತಿನಿಧಿ ಅರ್ಜುನ್ ಶೆಟ್ಟಿ ನೀಡಿದ ದೂರಿನಡಿ ಒಡಿಶಾ ಮೂಲದ ಸೌಮ್ಯ ರಂಜನ್ ಪಾಂಡ ವಿರುದ್ಧ ಎಫ್ಐಆರ್ ದಾಖಲಾಗಿದೆ.
2022 ರಿಂದ ಆರೋಪಿಯು ಕಂಪನಿಯಲ್ಲಿ ಸಿಸ್ಟಂ ಅಡ್ಮಿನಿಸ್ಟ್ರೇಟಿವ್ ಆಗಿ ಕೆಲಸ ಮಾಡುತ್ತಿದ್ದರು. ಅಧಿಕೃತ ವೆಚ್ಚಕ್ಕಾಗಿ ಕಂಪನಿಯು 2 ಲಕ್ಷ ಮಿತಿಯಿರುವ ಕ್ರೆಡಿಟ್ ಕಾರ್ಡ್ ನೀಡಿತ್ತು. ಅಗತ್ಯಕ್ಕೆ ಅನುಸಾರವಾಗಿ ಹಣದ ಮಿತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿತ್ತು.
ಈ ಅವಕಾಶ ಬಳಸಿಕೊಂಡು 2023ರ ಅಕ್ಟೋಬರ್‌ನಿಂದ 2024ರ ಜನವರಿವರೆಗೆ ಕಂಪನಿಗೆ ಸೇರಿದ 27 ಲಕ್ಷ ಹಣ ಬಳಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಣ ದುರ್ಬಳಕೆ ಸಂಬಂಧ ಉದ್ಯೋಗಿಯನ್ನು ಪ್ರಶ್ನಿಸಿದಾಗ ಚೀನಾ ಹಾಗೂ ಪಾಕ್ತಿಸಾನದ ಅನಾಮಧೇಯ ವ್ಯಕ್ತಿಗಳಿಂದ ತಾನು ಬೆದರಿಕೆಗೆ ಒಳಗಾಗಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಹಂತ-ಹಂತವಾಗಿ ಹಣ ನೀಡುವುದಾಗಿ ಒಪ್ಪಿಕೊಂಡರೂ ಹಣ ನೀಡದೆ ಸತಾಯಿಸಿದ್ದ. ಕಂಪನಿಯ ಹಿರಿಯ ನಿರ್ವಹಣಾ ಸಿಬ್ಬಂದಿಗೆ ಇ-ಮೇಲ್ ಮೂಲಕ ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಾರೆ. ಹಣ ನೀಡುವ ಕುರಿತು ಒತ್ತಡ ಹೇರಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಕಂಪನಿಗೆ ₹27 ಲಕ್ಷ ವಂಚಿಸಿ, ಸಿಬ್ಬಂದಿಗೆ ಅಶ್ಲೀಲ ಚಿತ್ರ ಕಳುಹಿಸಿದ್ದ ಆರೋಪಿ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಐಎಡಿಬಿ ಹಣ ದುರ್ಬಳಕೆ ಪ್ರಕರಣ (ಬಳ್ಳಾರಿ) : ನಗರದಲ್ಲಿನ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಲ್ಲಿ ನಡೆದಿದೆ ಎನ್ನಲಾದ ₹16.17 ಕೋಟಿ ದುರ್ಬಳಕೆ ಪ್ರಕರಣದಲ್ಲಿ ಬಂಧಿತನಾಗಿದ್ದ ಪ್ರಮುಖ ಆರೋಪಿ ಸಂತೋಷ್ ಕುಮಾರ್ ಪೊಲೀಸ್ ವಶದಲ್ಲಿದ್ದಾಗಲೇ ಪರಾರಿಯಾಗಿ, 24 ಗಂಟೆಯೊಳಗೆ ಮತ್ತೆ ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದ್ದರು.
ಗುತ್ತಿಗೆ ನೌಕರನಾಗಿದ್ದ ಸಂತೋಷ್ ಕುಮಾರ್ ಅವರು 2024ರ ಅಕ್ಟೋಬರ್‌ನಿಂದ 2025ರ ಡಿಸೆಂಬರ್ ಅವಧಿಯಲ್ಲಿ ನಕಲಿ ಸಹಿ ಮತ್ತು ಮೊಹರು ಬಳಸಿ ಇಲಾಖೆಯ ಚೆಕ್‌ಗಳ ಮೂಲಕ ಕೋಟ್ಯಂತರ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಮಾರ್ಚ್ 20ರಂದು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

