ಉಪಯುಕ್ತ ಸುದ್ದಿ

ನಂದಿನಿ ಹಾಲು ಮಾರಾಟ ದರ ಪ್ರತಿ ಲೀಟರ್​ಗೆ ₹8 ಏರಿಕೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ

Share It

ಬೆಂಗಳೂರು: ನಂದಿನಿ ಹಾಲಿನ‌ ಮಾರಾಟ ದರವನ್ನು ಪ್ರತಿ ಲೀಟರ್​ಗೆ 8 ರೂ. ಏರಿಕೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದ್ದು, ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಬೆಲೆ ಏರಿಕೆ ಸಂಬಂಧ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಸಿಎಂ ಅನುಮತಿ ಕೋರಲಿದ್ದಾರೆ.

ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ‌ ದರ ಏರಿಕೆಗೆ ಒಪ್ಪಿಗೆ ಸೂಚಿಸಲಾಗಿದೆ. ಪ್ರತಿ ಲೀಟರ್​ಗೆ 8 ರೂ.ರಷ್ಟು ಏರಿಕೆ ಮಾಡಲು ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ಸಿಎಂ ಡಿ.ಕೆ.ಶಿವಕುಮಾರ್ ಪರಿಷತ್ ಚುನಾವಣೆ ನೀತಿ ಸಂಹಿತೆ ಇರುವ ಕಾರಣ ಬೆಲೆ ಏರಿಕೆ ಜಾರಿಗೆ ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ. ಚುನಾವಣಾ ಆಯೋಗ ಒಪ್ಪಿಗೆ ಸೂಚಿಸಿದರೆ ನ.1ರಿಂದ ಹಾಲಿನ‌ದರ ಏರಿಕೆ ಅನ್ವಯವಾಗುವ ಸಾಧ್ಯತೆ ಇದೆ.‌

ರಾಜ್ಯ ಹಾಲು ಒಕ್ಕೂಟಗಳು ಮಾರಾಟ ದರ ಏರಿಕೆಗೆ ಒತ್ತಾಯಿಸಿದ್ದರು‌. ಹಾಲು ಒಕ್ಕೂಟಗಳ ನಿಯೋಗ ಸಿಎಂ ಡಿಕೆಶಿ ಭೇಟಿಯಾಗಿ ಬೆಲೆ ಏರಿಕೆಗೆ ಮನವಿ ಮಾಡಿದ್ದರು. ಹೈನುಗಾರಿಕೆಗೆ ಅಗತ್ಯವಿರುವ ಪಶು ಆಹಾರ, ಮೇವು, ಔಷಧೋಪಚಾರ ಸೇರಿದಂತೆ ನಿರ್ವಹಣಾ ವೆಚ್ಚ ನಿರಂತರವಾಗಿ ಹೆಚ್ಚಾಗುತ್ತಿರುವುದರಿಂದ ಹಾಲಿನ ಉತ್ಪಾದನಾ ವೆಚ್ಚ ಗಣನೀಯವಾಗಿ ಹೆಚ್ಚಾಗಿದ್ದು, ಸದ್ಯದ ಬರ ಪರಿಸ್ಥಿತಿಯಲ್ಲಿ ಬೆಳೆ ಕೊರತೆಯಿಂದ ವ್ಯವಸಾಯ ಆದಾಯ ತೀವ್ರವಾಗಿ ಕುಸಿದಿದ್ದು, ಮೇವಿನ ಲಭ್ಯತೆ ಕಡಿಮೆಯಾಗಿರುವುದರಿಂದ ಹೈನುಗಾರರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ನಿಯೋಗ ಮನವಿ ಮಾಡಿತ್ತು.

ಕರ್ನಾಟಕದಲ್ಲಿ ಒಕ್ಕೂಟ ಉತ್ಪಾದಕರಿಂದ ಟೋನ್ಡ್ ಹಾಲನ್ನು ಲೀಟರಿಗೆ ರೂ.35ಕ್ಕೆ ಖರೀದಿಸುತ್ತಿದ್ದು, ನೆರೆಯ ಆಂಧ್ರಪ್ರದೇಶದಲ್ಲಿ ರೂ. 41.5, ಕೇರಳದಲ್ಲಿ ರೂ. 41.8, ಮಹಾರಾಷ್ಟ್ರದಲ್ಲಿ ರೂ. 41, ತಮಿಳುನಾಡಿನಲ್ಲಿ ರೂ. 42.24 ಕ್ಕೆ ಖರೀದಿಸಲಾಗುತ್ತಿದೆ. ಇದೇ ರೀತಿ ಹಾಲಿನ ಗರಿಷ್ಠ ಮಾರಾಟ ದರದಲ್ಲಿ ಸಹ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಲೀಟರಿಗೆ ಕನಿಷ್ಠ ರೂ.12 ರಷ್ಟು ಕಡಿಮೆಯಿದೆ ಎಂದು ವಾದಿಸಿತ್ತು.


Share It

You cannot copy content of this page