ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಅವರು ಇಂದು (ಏ.3) ಮಂಡ್ಯದಲ್ಲಿ ಕಾರ್ಯಕರ್ತರ ಸಭೆ ಮಾಡಿದ್ದಾರೆ. “ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಲ್ಲ” ಎಂದು ಸುಮಲತಾ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿಯೂ ತಿಳಿಸಿದ್ದಾರೆ. ಅಂದಹಾಗೆ, ಸುಮಲತಾ ಜೊತೆಗೆ ನಟ ದರ್ಶನ್ ಕೂಡ ಸಭೆಯಲ್ಲಿ ಭಾಗಿಯಾಗಿ, ಪ್ರತಿಕ್ರಿಯೆ ನೀಡಿದ್ದಾರೆ.
ಯಮ ಕರೆದರೂ ಅಮ್ಮನ ಕೆಲಸ ಮುಗಿಸಿಯೇ ಹೋಗೋದು!
“ಕಳೆದ ಬಾರಿ ಪ್ರತಿಯೊಂದು ಹಳ್ಳಿಯಲ್ಲೂ ತಾಯಿಂದಿರು ನಮಗೆ ಆರತಿ ಬೆಳಗಿ, ‘ಹೋಗ್ರಪ್ಪ ನಿಮಗೆ ಒಳ್ಳೆದಾಗುತ್ತೆ’ ಎಂದು ಹಾರೈಸಿದ್ದರು. ಅವರ ಪಾದಗಳಿಗೆ ನನ್ನ ನಮಸ್ಕಾರಗಳು. ನಮಗೆಲ್ಲಾ ತುಂಬ ಪ್ರೀತಿ ತೋರಿಸಿದ್ದಾರೆ. ಆ ಯಮ ಬಂದು ಕರೆದರೂ, ‘ಇರಪ್ಪ, ನಮ್ಮ ಅಮ್ಮನ ಒಂದು ಕೆಲಸ ಇದೆ. ಅದನ್ನು ಮುಗಿಸಿಕೊಂಡು ಬರೋದು ನಾನು’ ಅಂತ ಹೇಳುತ್ತೇನೆ. ಯಾಕೆಂದರೆ, ಆ ಮನೆ ಜೊತೆಗೆ ನಮಗೆ ಅಷ್ಟೊಂದು ಒಡನಾಟ ಇದೆ, ಬಾಂಧವ್ಯ ಇದೆ” ಎಂದು ದರ್ಶನ್ ಹೇಳಿದ್ದಾರೆ.
ಜನರ ಬಳಿ ಮನವಿ ಮಾಡಿಕೊಂಡ ದರ್ಶನ್
“ನಾನು ಕಳೆದ ಬಾರಿ ಬಂದಾಗ ಬಲಗೈ ಮುರಿದಿತ್ತು, ಈಗ ಎಡಗೈ. ಅಸಲಿಗೆ, ಏಪ್ರಿಲ್ 2ರಂದು ಆಪರೇಷನ್ ಇತ್ತು. ಆದರೆ, ‘ಇಲ್ಲಪ್ಪ, ಅಮ್ಮನಿಗೆ ಡೇಟ್ ಕೊಟ್ಟುಬಿಟ್ಟಿದ್ದೀನಿ. ಅದು ಮುಗಿಸಿ ಬರ್ತಿನಿ’ ಅಂತ ಡಾಕ್ಟರ್‌ಗೆ ಹೇಳಿ, ಮಂಡ್ಯಕ್ಕೆ ಬಂದಿದ್ದೇನೆ. ಇವತ್ತು ರಾತ್ರಿ ಆಸ್ಪತ್ರೆಗೆ ದಾಖಲಾಗಿ, ನಾಳೆ ಬೆಳಗ್ಗೆ ಆಪರೇಷನ್ ಮಾಡಿಸಿಕೊಳ್ಳುತ್ತೇನೆ. ಅದಕ್ಕೆ ದಯವಿಟ್ಟು ನಾನು ಹೋಗಬೇಕಾದರೆ, ಸ್ವಲ್ಪ ಜಾಗ ಮಾಡಿಕೊಡಿ, ಕೈ ಎಳೆಯಬೇಡಿ ಎಂದು ಬೇಡಿಕೊಳ್ಳುತ್ತೇನೆ” ಎಂದು ದರ್ಶನ್ ಹೇಳಿದ್ದಾರೆ.
ತಾಯಿ ಯಾವತ್ತಿದ್ರೂ ತಾಯಿನೇ ಎಂದ ಡಿ ಬಾಸ್
“5 ವರ್ಷ ಏನೇನ್ ಮಾಡಿದ್ದಾರೆ ಎಂದು ನೀವೆಲ್ಲಾ ನೋಡಿದ್ದೀರಿ. ಓರ್ವ ಪಕ್ಷೇತರ ಸಂಸದರು ಇಷ್ಟೊಂದು ಕೆಲಸ ಮಾಡುವುದು ತುಂಬ ದೊಡ್ಡದು. ನಾನು ರಾಜಕೀಯ ಮಾತನಾಡುವುದಿಲ್ಲ. ಆದರೂ ಕೂಡ ನಾನು ಒಂದೇ ಮಾತಿನಲ್ಲಿ ಮುಗಿಸುತ್ತೇನೆ. ಅಮ್ಮ ಏನೇ ನಿರ್ಧಾರ ತೆಗೆದುಕೊಂಡರೂ ಕೂಡ ನಾನು ಅವರ ಹಿಂದೆ ನಿಂತೇ ಇರ್ತಿನಿ. ಯಾಕೆಂದರೆ, ಮನೆ ಮಕ್ಕಳು ಎಂದಾಗ, ನಾವು ಮನೆ ಮಕ್ಕಳ ಥರವೇ ಇರಬೇಕು. ತಾಯಿ ಯಾವತ್ತಿದ್ರೂ ತಾಯಿನೇ. ಸಾಯೋವರೆಗೂ ತಾಯಿನೇ” ಎಂದು ದರ್ಶನ್ ಹೇಳಿದ್ದಾರೆ.
ಮಂಡ್ಯ ಜನರ ಜೊತೆಗೆ ಇರುತ್ತೇವೆ ಎಂದ ನಟ ದರ್ಶನ್
“ಅಮ್ಮ ಏನ್ ಹೇಳುತ್ತಾರೋ, ಅದನ್ನು ಮಾಡುತ್ತೇನೆ. ಕಣ್ಣ ಮುಚ್ಚಿಕೊಂಡು ಹಾಳು ಬಾವಿಗೆ ಬೀಳು ಅಂದ್ರು ಬೀಳುವುದಕ್ಕೂ ರೆಡಿ ನಾನು. ಅಮ್ಮ ಏನೇ ನಿರ್ಧಾರ ತೆಗೆದುಕೊಂಡರೂ, ನಾನು ಮತ್ತು ನನ್ನ ತಮ್ಮ ಅಭಿಷೇಕ್ ಬದ್ಧರಾಗಿರುತ್ತೇವೆ. ಎಲ್ಲಾ ನನ್ನ ಆತ್ಮೀಯ ಸ್ನೇಹಿತರು, ಸೆಲೆಬ್ರಿಟಿಗಳು ನನಗೆ ಪ್ರೀತಿ ತೋರಿಸಿದ್ದೀರಿ, ಎಲ್ಲರಿಗೂ ಧನ್ಯವಾದಗಳು. ನಾವು ಎಂದಿಗೂ ಮಂಡ್ಯ ಜನರ ಜೊತೆಗೆ ಇರುತ್ತೇವೆ” ಎಂದು ನಟ ದರ್ಶನ್ ತೂಗುದೀಪ ಹೇಳಿದರು.