ರಾಜಕೀಯ ಸುದ್ದಿ

ದೇವೆಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್

Share It

ಬೆಂಗಳೂರು: ದೇವೇಗೌಡರು ದೇಶದ ಪ್ರಧಾನಿಯಾಗಿದ್ದು, ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು ಕಾಂಗ್ರೆಸ್ ಪಕ್ಷದ ಸಹಕಾರದಿಂದಲೇ ಹೊರತು ಬಿಜೆಪಿ ಪಕ್ಷದಿಂದಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಕಿಡಿ ಕಾರಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ಎಂ.ವಿ.ರಾಜೀವ್ ಗೌಡ ಪರ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಾದ್ಯಂತ ಕಾಂಗ್ರೆಸ್ ಪಕ್ಷ ಆಯೋಜಿಸಿರುವ ಚುನಾವಣಾ ರೋಡ್ ಶೋ ಉದ್ದೇಶಿಸಿ ಸಚಿವ ಕೃಷ್ಣ ಭೈರೆಗೌಡ ಮಾತನಾಡಿದರು.

ಕೇಂದ್ರ ಸರ್ಕಾರ ಆರು ಕೋಟಿ ಕನ್ನಡಿಗರಿಗೆ ಅನುದಾನ ಕಡಿತ ಮಾಡಿದ ವಿಚಾರದಲ್ಲಿ ಧ್ವನಿ ಎತ್ತದವರು, ಬರ ಪರಿಹಾರದಲ್ಲಿ ಆಗಿರುವ ಅನ್ಯಾಯದ ವಿರುದ್ದ ತುಟಿ ಬಿಚ್ಚದವರು ಈಗ ಪ್ರಧಾನಿಗಳ ಪಕ್ಕದಲ್ಲಿ ಕೂತು ಏನೇನೋ ಮಾತನಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಅನುದಾನದ ಪಾಲನ್ನು ಪಡೆಯಲು ಸುಪ್ರೀಂ ಕೋರ್ಟಿಗೆ ಹೋಗಿ ಹೋರಾಟ ಮಾಡಿ ಜಯ ಸಾಧಿಸಿದೆ ಎಂದು ಸಚಿವ ಕೃಷ್ಣ ಭೈರೆಗೌಡ ಹೇಳಿದರು.

ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕ ರಾಜ್ಯಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅತಿ ಕಡಿಮೆ ಅನುದಾನ ನೀಡಿ ಸತತ ಹತ್ತು ವರ್ಷಗಳ ಕಾಲ ವಂಚನೆ ಎಸಗಿದೆ. ಇದನ್ನು ಡಬಲ್ ಇಂಜಿನ್ ಸರ್ಕಾರ ಇದ್ದಾಗಲೂ ಯಾವ ಬಿಜೆಪಿ ನಾಯಕರು ಕೂಡ ಪ್ರಶ್ನಿಸಲಿಲ್ಲ. ಬೇರೆ ಬೇರೆ ರಾಜ್ಯಗಳಿಗೆ ಕಣ್ಣ ಮುಂದೆಯೇ ವಿಶೇಷ ಪ್ಯಾಕೇಜುಗಳು ಘೋಷಣೆಯಾದಾಗಲೂ ಕೂಡ ಕರ್ನಾಟಕದ ಬಿಜೆಪಿ ಸಂಸದರು ಬಾಯಿ ಮುಚ್ಚಿಕೊಂಡಿದ್ದನ್ನು ಕನ್ನಡಿಗರು ಇನ್ನೂ ಮರೆತಿಲ್ಲ. ಹೀಗಾಗಿ ಕಾಂಗ್ರೆಸ್ ಸರ್ಕಾರ ಅನುದಾನಕ್ಕಾಗಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಕೊನೆಗೆ ಸರ್ವೋಚ್ಚ ನ್ಯಾಯಾಲಯವು ಒಂದು ವಾರದ ಒಳಗೆ ಕರ್ನಾಟಕಕ್ಕೆ ಬರಬೇಕಾದ ಪಾಲನ್ನು ಒಂದು ವಾರದೊಳಗೆ ಬಿಡುಗಡೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ. ಇದು ಆರು ಕೋಟಿ ಕನ್ನಡಿಗರ ಆತ್ಮಸಾಕ್ಷಿಯ ಹೋರಾಟಕ್ಕೆ ಸಂದ ಜಯ ಎಂದು ಸಚಿವ ಕೃಷ್ಣಭೈರೆಗೌಡ ಅಭಿಪ್ರಾಯಪಟ್ಟರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ಎಂ.ವಿ.ರಾಜೀವಗೌಡ ಸುಸಂಸ್ಕೃತರು. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದವರಿಗೆ ಬೆಂಗಳೂರಿಗರ ನೋವು ಅರ್ಥವಾಗುತ್ತದೆ. ಹೀಗಾಗಿ ಎಲ್ಲಿಂದಲೋ ಬಂದು ಬಿಜೆಪಿ ಪಕ್ಷದಿಂದ ಪ್ರತಿಷ್ಠಾಪನೆಗೊಂಡಿರುವ ಬಗ್ಗೆ ತಲೆ ಕೆಡಿಸಿಕೊಳ್ಳದೇ ನಿಮ್ಮೊಂದಿಗೆ ಸದಾ ಕಾಲ ಜೊತೆಗಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ಎಂ.ವಿ.ರಾಜೀವ್ ಗೌಡ ರನ್ನು ಲೋಕಸಭೆಗೆ ಕಳುಹಿಸಿಕೊಡಬೇಕೆಂದು ಇದೇ ಸಂಧರ್ಭದಲ್ಲಿ ಸಚಿವ ಕೃಷ್ಣ ಭೈರೆಗೌಡ ಮತದಾರರಲ್ಲಿ ಮನವಿ ಮಾಡಿದರು.


Share It

You cannot copy content of this page