ಶಿವಮೊಗ್ಗ: ಬಿಜೆಪಿ ಪಕ್ಷದಿಂದ ತಮ್ಮನ್ನು ಉಚ್ಚಾಟಿಸಿದರೂ ಕೆ.ಎಸ್ ಈಶ್ವರಪ್ಪ ಮಾತ್ರ ನಿರ್ಭಾವುಕ, ನಿರ್ಲಿಪ್ತ ಮತ್ತು ನಿರಾತಂಕಿತರಾಗಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡುವಾಗ ಪತ್ರಕರ್ತರೊಬ್ಬರು ಮತ್ತೆ ಬಿಜೆಪಿಗೆ ಹೋಗ್ತೀರಾ ಸಾರ್? ಅಂತ ಕೇಳಿದಾಗ ಲೋಕಸಭಾ ಚುನಾವಣೆಯಲ್ಲಿ ತಾನು ಗೆದ್ದ ಬಳಿಕ ಅವರಪ್ಪ ಬಂದು ತನ್ನನ್ನು ಪಕ್ಷಕ್ಕೆ ಕರೆದೊಯ್ಯುತ್ತಾನೆ ಎಂದು ತಮ್ಮ ಬೆಂಬಲಿಗರ ಕಿವಿಗಡಚಿಕ್ಕುವ ಚಪ್ಪಾಳೆಗಳ ನಡುವೆ ಹೇಳಿದರು.
ಪಕ್ಷ ಬಿಟ್ಟು ಹೋಗಿದ್ದ ಜಗದೀಶ್ ಶೆಟ್ಟರ್ ಅವರನ್ನು ಯಡಿಯೂರಪ್ಪ ವಾಪಸ್ಸು ಕರೆತಂದರು, ಆದರೆ ನಾನ್ಯಾವತ್ತೂ ಪಕ್ಷ ಬಿಟ್ಟು ಹೋಗುವ ಕೆಲಸ ಮಾಡಿಲ್ಲ ಯಾಕೆಂದರೆ ಇದು ತಾನು ಕಟ್ಟಿರುವ ಪಕ್ಷ, ಅದರೆ ಯಡಿಯೂರಪ್ಪ ಪಕ್ಷದಿಂದ ಆಚೆ ಹೋಗಿ ಕೆಜೆಪಿ ರಚಿಸಿದ್ದರು, ಹಾಗಾಗಿ ಬಿಜೆಪಿಯಲ್ಲಿ ಅವರು ಡೂಪ್ಲಿಕೇಟ್ ಎಂದು ಈಶ್ವರಪ್ಪ ಹೇಳಿದರು.
ರಾಜ್ಯ ಬಿಜೆಪಿಯನ್ನು ಅಪ್ಪ ಮಕ್ಕಳಿಂದ ಮುಕ್ತ ಮಾಡುವುದು ತನ್ನ ಗುರಿಯಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಘವೇಂದ್ರ ಸೋತ ಬಳಿಕ ಅವರ ರಾಜಕೀಯ ಕತೆ ಮುಗಿದಂತೆ ಮತ್ತು ಚುನಾವಣೆ ಬಳಿಕ ವಿಜಯೇಂದ್ರ ರಾಜ್ಯಾಧ್ಯಕ್ಷನ ಸ್ಥಾನದಿಂದ ಕೆಳಗಿಳಿಯುತ್ತಾನೆ, ಅಲ್ಲಿಗೆ ಬಿಜೆಪಿಯಲ್ಲಿ ಅಪ್ಪ ಮಕ್ಕಳ ಕತೆ ಮುಗಿದಂತಾಗುತ್ತದೆ ಎಂದು ಈಶ್ವರಪ್ಪ ಭವಿಷ್ಯ ನುಡಿದರು.