ಅಹಮದಾಬಾದ್: ಭರ್ಜರಿ ಪ್ರದರ್ಶನದ ಮೂಲಕ ಪ್ಲೇ ಆಫ್ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಲಿಮನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿ, ಟೂರ್ನಿಯಿಂದ ಹೊರಬಿದ್ದಿತು.
ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡ ಆರ್‌ಸಿಬಿಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಮಾಡಿಕೊಟ್ಟಿತು. 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿದ ಆರ್‌ಸಿಬಿ, 173 ರನ್‌ಗಳ ಟಾರ್ಗೆಟ್ ಫಿಕ್ಸ್ ಮಾಡಿತು. ಉತ್ತಮ ಬೌಲಿಂಗ್ ಪ್ರದರ್ಶನದ ನಡುವೆಯೂ ರಾಜಸ್ಥಾನ ಉತ್ತಮ ಬ್ಯಾಟಿಂಗ್ ನೆರವಿನಿಂದ ಗೆಲುವು ಸಾಧಿಸಿತು. ಆರು ವಿಕೆಟ್ ಕಳೆದುಕೊಂಡು 173 ರನ್‌ಗಳ ಗುರಿಯನ್ನು ಮುಟ್ಟಿತು.
ರಾಜಸ್ಥಾನ್ ರಾಯಲ್ಸ್ಗೆ ಯಶಸ್ವಿ ಜೈಸ್ವಾಲ್ ಮತ್ತು ಟಾಮ್ ಕೋಹ್ಲರ್ ಕಾಡ್ಮೋರ್ ಉತ್ತಮ ಆರಂಭ ನೀಡಿದರು. ಟಾಮ್ ಕೋಹ್ಲರ್ ಕಾಡ್ಮೋರ್ 20 ರನ್ ಗಳಿಸಿ ಔಟಾದರೆ, ಯಶಸ್ವಿ ಜೈಸ್ವಾಲ್ 45 ರನ್ ಗಳಿಸಿ ಔಟಾದರು. ಸಂಜು ಸಾಮ್ ಸನ್ 17 ರನ್ ಗಳಿಸಿದರೆ, ರಿಯಾನ್ ಪರಾಗ್ ಮತ್ತೊಮ್ಮೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಅಂತಿಮವಾಗಿ ಸಿಮ್ರಾನ್ ಹೆಟ್ಮೇರ್ ಮತ್ತು ರೋವ್ಮಾನ್‌ಪೋವೆಲ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಬೌಲಿಂಗ್‌ನಲ್ಲಿ ಸಿರಾಜ್ ಉತ್ತಮ ಪ್ರದರ್ಶನ ನೀಡಿ, 18 ನೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದು, ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ, 19 ನೇ ಓವರ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ರೋವ್ಮಾನ್ ಪೊವೆಲ್ ಗೆಲುವಿನ ದಡ ಮುಟ್ಟಿಸಿದರು.