ಬೆಂಗಳೂರು: ನಾಟಕದಲ್ಲಿ ಅಭಿನಯಿಸುವಾಗಲೇ ಕಲಾವಿದರೊಬ್ಬರು ವೇದಿಕೆ ಮೇಲೆ ಕುಸಿದು ಪ್ರಾಣ ಬಿಟ್ಟ ಘಟನೆ ಯಲಹಂಕ ತಾಲ್ಲೂಕಿನ ಸಾತನೂರು ಬಳಿ ನಡೆದಿದೆ.
ಮೃತಪಟ್ಟವರು ದೇವನಹಳ್ಳಿ ತಾಲೂಕು ಅರದೇಶಹಳ್ಳಿ ನಿವಾಸಿ ಎನ್. ಮುನಿಕೆಂಪಣ್ಣ ಎಂದು ತಿಳಿದುಬಂದಿದೆ. ಶುಕ್ರವಾರ ರಾತ್ರಿ ಯಲಹಂಕ ತಾಲೂಕಿನ ಸಾತನೂರು ಬಳಿ ಕುರುಕ್ಷೇತ್ರ ನಾಟಕ ಪ್ರದರ್ಶನ ನಡೆಯುತ್ತಿತ್ತು. ಈ ವೇಳೆ, ನಾಟಕದಲ್ಲಿ ಶಕುನಿಯ ಪಾತ್ರ ನಿರ್ವಹಿಸುತ್ತಿದ್ದ ಮುನಿಕೆಂಪಣ್ಣ ಮಧ್ಯರಾತ್ರಿ 1.30ರ ಸುಮಾರಿಗೆ ಅಭಿನಯಿಸುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮುನಿಕೆಂಪಣ್ಣ ಅವರು ಹೃದಯಾಘಾತದಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ. ಸಾವಿಗೂ ಮುನ್ನ ವೇದಿಕೆಯಲ್ಲಿ ಅದ್ಭುತವಾಗಿ ಡೈಲಾಗ್ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮೃತ ಮುನಿಕೆಂಪಣ್ಣ ಅವರು ನಿವೃತ್ತ ಉಪನ್ಯಾಸಕರು, ಸಾಹಿತಿ, ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ದೇವನಹಳ್ಳಿಯ 28ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಇಂದು ಶನಿವಾರ ಮಧ್ಯಾಹ್ನ 3 ಗಂಟೆಗೆ ಮುನಿಕೆಂಪಣ್ಣ ಅವರ ಹುಟ್ಟೂರಾದ ಅರದೇಶಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಯಕ್ಷಗಾನ ಕಲಾವಿದ ಸಾವು: ಇದೇ ರೀತಿಯ ಘಟನೆ ಬುಧವಾರ ರಾತ್ರಿ ಕೋಟ ಗಾಂಧಿ ಮೈದಾನದ ಬಳಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದ ವೇಳೆ ನಡೆದಿತ್ತು. ಯಕ್ಷಗಾನದ ಬಳಿಕ ಹೃದಯಾಘಾತದಿಂದ ಧರ್ಮಸ್ಥಳ ಯಕ್ಷಗಾನ ಮೇಳದ ಸವ್ಯಸಾಚಿ ಕಲಾವಿದ ಗಂಗಾಧರ ಪುತ್ತೂರು(60) ಅವರು ವೇಷ ಕಳಚುತ್ತಿರುವಾಗಲೇ ಮೃತಪಟ್ಟಿದ್ದರು.
ಇವರು ಕುಕ್ಕಿಂತ್ತಾಯ ದೈವದ ವೇಷವನ್ನು ನಿರ್ವಹಿಸಿ ಬಳಿಕ ಚೌಕಿಗೆ ಆಗಮಿಸಿ ಕಿರೀಟ, ಯಕ್ಷಗಾನದ ಆಭರಣ ತೆಗೆದಿಟ್ಟು ಇನ್ನೇನು ಮುಖದ ಬಣ್ಣವನ್ನು ಅಳಿಸುತ್ತಿರುವಾಗ ತೀವ್ರ ಹೃದಯಾಘಾತಕ್ಕೀಡಾಗಿದ್ದರು. ಯಕ್ಷಗಾನ ರಂಗದ ಸವ್ಯಸಾಚಿ ಕಲಾವಿದರಾದ ಇವರು ಸ್ತ್ರೀವೇಷದಿಂದ ಹಿಡಿದು ಪುಂಡುವೇಷ, ರಾಜವೇಷ, ಹೆಣ್ಣುಬಣ್ಣ ಸಮರ್ಥವಾಗಿ ನಿರ್ವಹಿಸುತ್ತಿದ್ದರು. 30 ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಗಂಗಾಧರ ಪುತ್ತೂರು ಧರ್ಮಸ್ಥಳ ಮೇಳದಲ್ಲಿಯೇ ಕಲಾವಿದರಾಗಿ ತಿರುಗಾಟ ಮಾಡಿದ್ದರು.