ರಾಜಕೀಯ ಸುದ್ದಿ

ಲೈಂಗಿಕ ದೌರ್ಜನ್ಯ ಪ್ರಕರಣ: ಎಚ್.ಡಿ.ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ SIT

Share It

ಹಾಸನ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಚುರುಕುಗೊಂಡಿದೆ. ಸಂಸದರ ನಿವಾಸದಲ್ಲೇ ಅತ್ಯಾಚಾರ ನಡೆದಿರುವ ಬಗ್ಗೆ ದೂರು ಹಿನ್ನೆಲೆ ಸಂಸದರ ಹಾಸನ ನಿವಾಸದ ಗೇಟ್ ಗೆ ಬೀಗ ಹಾಕಲಾಗಿದೆ. ಸಾಕ್ಷಿ ನಾಶದ ಆತಂಕ ಹಿನ್ನೆಲೆ ಸಂಸದರ ನಿವಾಸದ ಗೇಟಿಗೆ ಬೀಗ ಹಾಕಲಾಗಿದೆ. ಸಂಸದರ ನಿವಾಸದಿಂದಲೇ ಬೆಂಗಳೂರಿಗೆ ತೆರಳಿ ಪ್ರಜ್ವಲ್ ವಿದೇಶಕ್ಕೆ ತೆರಳಿದ್ದರು.

ಇನ್ನು ಪ್ರಕರಣ ಸಂಬಂಧ ಹೆಚ್‌.ಡಿ ರೇವಣ್ಣ ಅವರ ಹೊಳೆನರಸೀಪುರದ ಮನೆಗೆ ಇಬ್ಬರು ಸಂತ್ರಸ್ಥೆಯರನ್ನು ಎಸ್ಐಟಿ ಕರೆ ತಂದಿದೆ. ಓರ್ವ ಸಂತ್ರಸ್ಥೆ ಹಾಸನದ ಎಂಪಿ ಹೌಸ್ ನಲ್ಲಿ ಪ್ರಜ್ವಲ್ ರೇವಣ್ಣರಿಂದ ಅತ್ಯಾಚಾರ ಆರೋಪ ಮಾಡಿರುವ ಬಗ್ಗೆ ಸಿಐಡಿ ಬಳಿ ದೂರು ನೀಡಿರುವಾಕೆ, ಈಕೆ ಹೊಳೆನರಸೀಪುರ ಮನೆಯಲ್ಲೂ ಅತ್ಯಾಚಾರ ಆಗಿದ್ದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಮತ್ತೊಬ್ಬಾಕೆ ಹೊಳೆನರಸೀಪುರದ ಲೈಂಗಿಕ ಕಿರುಕುಳ ಪ್ರಕರಣ ಸಂತ್ರಸ್ತೆ ಇದರಲ್ಲಿ ಹೆಚ್‌.ಡಿ ರೇವಣ್ಣ ಎ1 ಆರೋಪಿ. ಎಸ್‌ಐಟಿ ಇಬ್ಬರಿಂದಲೂ ಸ್ಥಳ‌ ಮಹಜರ್ ನಡೆಸಿ ಹೇಳಿಕೆಯನ್ನು ದಾಖಲಿಸಿಕೊಂಡಿದೆ.

ಎಚ್.ಡಿ.ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು: ಹೊಳೆನರಸೀಪುರಲ್ಲಿರುವ ರೇವಣ್ಣ ನಿವಾಸಕ್ಕೆ ಎಸ್‌ಐಟಿ ಅಧಿಕಾರಿಗಳ ಭೇಟಿ ಹಿನ್ನೆಲೆ ಸ್ಥಳೀಯ ಪೊಲೀಸರು ಅದಕ್ಕೂ ಮುಂಚೆ ರೇವಣ್ಣ ನಿವಾಸಕ್ಕೆ ಬಂದು ಮನೆಯಲ್ಲಿರುವ ರೇವಣ್ಣ ಪತ್ನಿ‌ ಭವಾನಿ ರೇವಣ್ಣಗೆ ವಿಚಾರ ತಿಳಿಸಿದರು. ಇಂದು ಶನಿವಾರ ಬೆಳಗ್ಗೆ 11.30ರ ಸುಮಾರಿಗೆ ರೇವಣ್ಣ ನಿವಾಸಕ್ಕೆ ಎಸ್‌ಐಟಿ ತಂಡ ಸಂತ್ರಸ್ತೆಯರೊಂದಿಗೆ ಆಗಮಿಸಿ ಸ್ಥಳ ಮಹಜರು ನಡೆಸಿತು.

ರೇವಣ್ಣ ನಿವಾಸದಲ್ಲಿ ಮಹಿಳೆ‌‌ ಮೇಲೆ‌ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೊಳೆನರಸೀಪುರ ನಗರ ಠಾಣೆಯಲ್ಲಿ ಸಂತ್ರಸ್ಥೆ ನೀಡಿದ್ದ ದೂರಿನ ಹಿನ್ನೆಲೆ‌ ಅವರ ಮನೆಯಲ್ಲಿಯೇ ಸ್ಥಳ ಮಹಜರು ನಡೆಸಿತು.

ಇದಕ್ಕೂ ಮುನ್ನ ಸ್ಥಳ ಮಹಜರು ನಡೆಸಲು ಬೇಕಾದ ಅಗತ್ಯ ವಸ್ತುಗಳು, ಸಿಪಿಯು, ಮಾನೀಟರ್, ಪ್ರಿಂಟರ್ ಅನ್ನು ಹೊಳೆನರಸೀಪುರ ಪೊಲೀಸರು ರೇವಣ್ಣ ನಿವಾಸಕ್ಕೆ ತೆಗೆದುಕೊಂಡು ಬಂದರು. ಪಂಚನಾಮೆ ಬಳಿಕ ಸ್ಥಳದಲ್ಲಿಯೇ ಸಂತ್ರಸ್ಥ ಮಹಿಳೆಯ ಹೇಳಿಕೆ ದಾಖಲಿಸಿದ್ದು, ಮಾಜಿ ಸಚಿವ ರೇವಣ್ಣ ಪರವಾದ ವಕೀಲರು ಹಾಗೂ ಕೆಲ ಜೆಡಿಎಸ್ ಮುಖಂಡರು ಸ್ಥಳದಲ್ಲಿ ಹಾಜರಿದ್ದರು. ಭವಾನಿ ರೇವಣ್ಣ ಮನೆಯೊಳಗೆ ಇದ್ದರು.

ಇನ್ನು ಸಂತ್ರಸ್ಥೆಯನ್ನು ತನಿಖಾ ತಂಡ ಮನೆಯೊಳಗೆ ಕರೆದೊಯ್ದು ಅಡುಗೆ ಮನೆ, ಬೆಡ್ ರೂಂ ಹಾಗು ಸ್ಟೋರ್ ರೂಂ ನಲ್ಲಿ ಮಹಜರು ನಡೆಸಿ ಹೇಳಿಕೆ ದಾಖಲಿಸಿತು. ಯಾಕೆಂದರೆ ಮನೆಯಲ್ಲಿ ಭವಾನಿ ರೇವಣ್ಣ ಇಲ್ಲದ ವೇಳೆ ಈ 3 ಕಡೆ ದೌರ್ಜನ್ಯ ನಡೆಸಿದ್ದ ಬಗ್ಗೆ ಸಂತ್ರಸ್ಥೆ ಆರೋಪಿಸಿದ್ದಳು.

ಹಾಸನದ ಸಂಸದರ ನಿವಾಸದಲ್ಲೂ ಸ್ಥಳ ಮಹಜರು: ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ಹಿನ್ನೆಲೆ, ಹಾಸನದ ಆರ್.ಸಿ. ರಸ್ತೆಯಲ್ಲಿರುವ ಪ್ರಜ್ವಲ್ ನಿವಾಸಕ್ಕೆ SIT ಆಗಮಿಸಿ ಸ್ಥಳ ಮಹಜರು ನಡೆಸಲಿದೆ. ಈ ಹಿನ್ನೆಲೆ ಸ್ಥಳೀಯ ಡಿ.ಆರ್.ಪೊಲೀಸರು ಆಗಮಿಸಿ ನಿವಾಸಕ್ಕೆ ಭದ್ರತೆ ನೀಡಿದೆ. ಸಂಸದರ ನಿವಾಸದಲ್ಲೇ ಅತ್ಯಾಚಾರ ಆರೋಪ ಹಿನ್ನೆಲೆ ಸಂತ್ರಸ್ಥೆಯನ್ನು ಕರೆತಂದು ಸ್ಥಳ ಮಹಜರು ನಡೆಸಲಿದ್ದಾರೆ.

ಇದಕ್ಕೂ ಮುನ್ನ ಸಂಸದರ ನಿವಾಸದ ಕೀಯನ್ನು ಪ್ರಜ್ವಲ್‌ ಪಿಎ ಕೈಯಿಂದ ಪೊಲೀಸರು ವಶಕ್ಕೆ ಪಡೆದಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ನಿವಾಸದ ಕೀ ವಶಕ್ಕೆ ಪಡೆದು ಸಾಕ್ಷಿ ನಾಶವಾಗದಂತೆ ಎಚ್ಚರ ವಹಿಸಿದ್ದರು. ಈ ಪ್ರಕರಣ ಸಿಐಡಿ ಬಳಿ ದಾಖಲಾಗಿದೆ. ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯೆ ನೀಡಿರುವ ದೂರಾಗಿದೆ. ಪ್ರಜ್ವಲ್‌ ಈ ಪ್ರಕರಣ ಎ1 ಆರೋಪಿಯಾಗಿದ್ದು, ಮಧ್ಯಾಹ್ನ ಇಲ್ಲಿ ಸ್ಥಳ ಮಹಜರು ನಡೆಯಲಿದೆ. ಇದೇ ನಿವಾಸದಿಂದ ಪ್ರಜ್ವಲ್ ಬೆಂಗಳೂರಿಗೆ ಬಂದು ಅಲ್ಲಿಂದ ರಾಜತಾಂತ್ರಿಕ ಪಾಸ್‌ ಪೋರ್ಟ್ ಮೂಲಕ ವಿದೇಶಕ್ಕೆ ತೆರಳಿದ್ದಾರೆ. ಈಗಾಗಲೇ ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕೆ ಲುಕ್ ಔಟ್ ನೋಟೀಸ್ ಜಾರಿಯಾಗಿದೆ.


Share It

You cannot copy content of this page