ಅಪರಾಧ ರಾಜಕೀಯ ಸುದ್ದಿ

ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ನೀಡಲು ಸಿಬಿಐಗೆ ಎಸ್ಐಟಿ ಮನವಿ

Share It

ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್​​ಗೆ ಎಸ್ಐಟಿ ಅಧಿಕಾರಿಗಳು ಸಿಬಿಐ ಅಧಿಕಾರಿಗಳಿಗೆ ಇಂಟರ್ ಪೋಲ್ ಮೂಲಕ ಮನವಿ ಮಾಡಿದ್ದಾರೆ.

ಬ್ಲೂ ಕಾರ್ನರ್ ನೋಟಿಸ್​ ಮೂಲಕ ಪ್ರಜ್ವಲ್ ಇರುವ ಸ್ಥಳ, ಚಟುವಟಿಕೆಗಳು ಸೇರಿದಂತೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಪ್ರಯತ್ನ ಮಾಡಬಹುದಾಗಿದೆ. ಹೀಗಾಗಿ ಇಂಟರ್ ಪೋಲ್​​ನಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲು ತಯಾರಿ ನಡೆಯುತ್ತಿದೆ.

ವಿದೇಶಗಳಲ್ಲಿರುವ ಆರೋಪಿಗಳ ಬಂಧನಕ್ಕಾಗಿ ಸಾಮಾನ್ಯವಾಗಿ ಸಿಬಿಐ ಇಂಟರ್​ಪೋಲ್ ಮೂಲಕ ರೆಡ್ ಕಾರ್ನರ್ ಹಾಗೂ ಬ್ಲೂ ಕಾರ್ನರ್ ನೋಟಿಸ್​ಗಳನ್ನು ಹೊರಡಿಸುತ್ತವೆ. ಸಾಮಾನ್ಯವಾಗಿ ಇಂಥ ಪ್ರಕರಣಗಳಲ್ಲಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗುತ್ತಿದೆ. ರೆಡ್ ಕಾರ್ನರ್ ನೋಟಿಸ್ ಅಂದರೆ, ಪ್ರಪಂಚದ ಯಾವುದೇ ಕಡೆಯಲ್ಲಿರುವ ಆರೋಪಿ ಅಥವಾ ಅಪರಾಧಿಯನ್ನು ಹಸ್ತಾಂತರಿಸಲು ಅಥವಾ ಅಂತಹುದೇ ಕಾನೂನು ಕ್ರಮ ಕೈಗೊಳ್ಳಲು ಮಾಡುವ ವಿನಂತಿಯಾಗಿದೆ.

ಮತ್ತೊಂದೆಡೆಯಲ್ಲಿ, ಬ್ಲೂ ಕಾರ್ನರ್ ಮೂಲಕ ಇಂಟರ್‌ಪೋಲ್ ವಿದೇಶಿ ಸಂಸ್ಥೆಗಳ ಸಹಯೋಗದೊಂದಿಗೆ ಅಪರಾಧಿ/ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತದೆ. ಅಂದರೆ, ಇಂಟರ್‌ಪೋಲ್ ತನ್ನ ಯಾವುದೇ ಸದಸ್ಯ ರಾಷ್ಟ್ರದಿಂದ ಬ್ಲೂ ಕಾರ್ನರ್ ನೋಟಿಸ್ ಅನ್ನು ಜಾರಿಗೊಳಿಸಿ ಅಪರಾಧಿಯ ಗುರುತು, ಸ್ಥಳ ಅಥವಾ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

ಪ್ರಜ್ವಲ್ ರೇವಣ್ಣ ವಿರುದ್ಧ ಎಸ್ಐಟಿ ಕೆಲವು ದಿನಗಳ ಹಿಂದಷ್ಟೇ ಲುಕ್​ಔಟ್ ನೋಟಿಸ್ ಜಾರಿಗೊಳಿಸಿತ್ತು. ಯಾವುದೇ ಒಂದು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಅಥವಾ ನಾಪತ್ತೆಯಾಗಿರುವ ಆರೋಪಿಯ ಪತ್ತೆಗೆ ತನಿಖಾ ಸಂಸ್ಥೆಗಳು ಅನುಸರಿಸುವ ಕ್ರಮ ಇದಾಗಿದೆ. ಇದನ್ನು ದೇಶದ ವಲಸೆ ಬ್ಯೂರೋ ಹಾಗೂ ಗೃಹ ಸಚಿವಾಲಯ ಮಾತ್ರ ನೀಡಬಹುದು.

ಎಸ್​ಐಟಿ ಅಧಿಕಾರಿಗಳ ಜತೆ ಸಿಎಂ ಚರ್ಚೆ: ಪ್ರಜ್ವಲ್ ಪ್ರಕರಣ ಸಂಬಂಧ ಎಸ್​ಐಟಿ ಅಧಿಕಾರಿಗಳ ಜತೆ ಸಿಎಂ ಸಿದ್ದರಾಮಯ್ಯ ಶನಿವಾರ ಚರ್ಚೆ ನಡೆಸಿದರು. ಸಂಸದ ಪ್ರಜ್ವಲ್ ಕೇಸ್​ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಸರ್ಕಾರ ಮಧ್ಯಪ್ರವೇಶಿಸಿ ಬಂಧಿಸಬೇಕೆಂಬ ಒತ್ತಡ ಹೆಚ್ಚಳವಾಗ್ತಿದೆ. ಇನ್ನೂ ಬಂಧನವಾಗಿಲ್ಲವೇಕೆ ಎಂದು ಸಿಎಂ ಅಧಿಕಾರಿಗಳನ್ನು ತರಾಟೆ ತಗೆದುಕೊಂಡರು. ಸಿಎಂ ಸಿದ್ದರಾಮಯ್ಯ ಗರಂ ಆಗ್ತಿದ್ದಂತೆ ಸ್ಪಷ್ಟನೆ ಕೊಟ್ಟ ಅಧಿಕಾರಿಗಳು, ಸೂಕ್ತ ಕ್ರಮಗಳೊಂದಿಗೆ ಬಂಧಿಸುತ್ತೇವೆ ಎಂದು ಭರವಸೆ ನೀಡಿದರು.

ಎಸ್​ಐಟಿಗೆ ಹೆಚ್ಚುವರಿ ಸಿಬ್ಬಂದಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗಾಗಿ ರಚಿಸಲಾಗಿರುವ ಎಸ್​ಐಟಿಗೆ ರಾಜ್ಯ ಸರ್ಕಾರ ಮತ್ತಷ್ಟು ಅಧಿಕಾರಿ, ಸಿಬ್ಬಂದಿಯನ್ನು ನೀಡಿದೆ. ತನಿಖೆಗೆ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿ ನೇಮಿಸಿ ಆದೇಶ ಹೊರಡಿಸಿದೆ. ಮತ್ತೆ 8 ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಿ ಆದೇಶ ಹೊರಡಿಸಲಾಗಿದೆ. ಓರ್ವ ಎಸ್​ಪಿ, ಇಬ್ಬರು ಇನ್ಸ್​ಪೆಕ್ಟರ್​ಗಳು​, ಓರ್ವ ಎಎಸ್ಐ, ಓರ್ವ ಹೆಡ್ ಕಾನ್ಸ್​ಟೇಬಲ್, 3 ಕಾನ್ಸ್​ಟೇಬಲ್​ಗಳ ನಿಯೋಜನೆ ಮಾಡಲಾಗಿದೆ.


Share It

You cannot copy content of this page