ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ರೋಚಕ ಪಂದ್ಯದಲ್ಲಿ ಅಭೂಥಪೂರ್ವ ಗೆಲುವು ಆರ್‌ಸಿಬಿಯದ್ದಾಗಿದೆ. ತಂಡ ಪ್ಲೇ ಆಪ್ ಪ್ರವೇಶಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಈ ಗೆಲುವಿಗೆ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗಣ್ಯಾತೀಗಣ್ಯರು ಸಾಕ್ಷಿಯಾಗುವ ಮೂಲಕ ಪಂದ್ಯವನ್ನು ಆನಂದಿಸಿದ್ದಾರೆ. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಗೆಲುವನ್ನು ಕಂಡು ಕಣ್ತುಂಬಿಕೊಂಡಿದ್ದಾರೆ. ಆರ್‌ಸಿಬಿ ತಂಡದ ಅಪ್ಪಟ ಅಭಿಮಾನಿ ಹಾಗೂ ಬೆಂಬಲಿಗರಾಗಿರುವ ಶಿವಣ್ಣ ಆರ್‌ಸಿಬಿ ಜರ್ಸಿ ತೊಟ್ಟು ಚಿನ್ನಸ್ವಾಮಿಗೆ ಬಂದಿದ್ದರು.
ಶಿವರಾಜ್ ಕುಮಾರ್ ಜೊತೆಗೆ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಸೇರಿ ಇನ್ನೂ ಕೆಲವು ಚಿತ್ರರಂಗದ ಗೆಳೆಯರಿದ್ದರು. ಟ್ವಿಟ್ಟರ್‌ನಲ್ಲಿ ಸಹ ತಮ್ಮ ಚಿತ್ರಗಳನ್ನು ಅಪ್‌ಲೋಡ್ ಮಾಡಿರುವ ಶಿವಣ್ಣ, “ಬರ್ಕಳಯ್ಯ, ಮುಂದುಗಡೆ ಪೇಜ್‌ನಲ್ಲಿ ಬರ್ಕೋ ಗೆಲ್ಲೋದು ಆರ್‌ಸಿಬಿ ಹುಡುಗರೇಯ” ಎಂದು ಬರೆದುಕೊಂಡಿದ್ದಾರೆ.
ಶಿವಣ್ಣನನ್ನು ಚಿನ್ನಸ್ವಾಮಿಯ ದೊಡ್ಡ ಪರದೆಯ ಮೇಲೆ ತೋರಿಸುತ್ತಿದ್ದಂತೆ ಪ್ರೇಕ್ಷಕರು ಕೂಗಾಡಿ ಕಿರುಚಾಡಿ ಅಬ್ಬರ ಎಬ್ಬಿಸಿದರು. ಟಗರು ಬಂತು ಟಗರು ಹಾಡು ಹಾಕಿದಾಗಂತೂ, ಇಡೀ ಸ್ಟೇಡಿಯಂ ಕುಣಿದು ಕುಪ್ಪಳಿಸಿತು.
ಶಿವಣ್ಣ ಮಾತ್ರವಲ್ಲದೆ, ಕಾಂತಾರದ ರಿಷಬ್ ಶೆಟ್ಟಿ ಮತ್ತಿತರ ಚಿತ್ರರಂಗದ ಪ್ರಮುಖ ಪಂದ್ಯವನ್ನು ವೀಕ್ಷಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಡಾ.ಜಿ. ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಮಹದೇವಪ್ಪ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿ ಅನೇಕ ಗಣ್ಯರು ಪಂದ್ಯವನ್ನು ವೀಕ್ಷಿಸಿದ್ದಾರೆ.