ಬೆಂಗಳೂರು: ಪೆನ್ ಡ್ರೈವ್ ಪೆಂಡಭೂತದ ನಡುವೆಯೂ ಜೆಡಿಎಸ್ ಜತೆಗೆ ಮೈತ್ರಿ ಮುಂದುವರಿಸಿಕೊಳ್ಳಲು ಬಿಜೆಪಿ ನಿರ್ಧರಿಸಿದ್ದು, ಪರಿಷತ್ ಚುನಾವಣೆಯಲ್ಲಿಯೂ ಎರಡು ಪಕ್ಷಗಳ ದೋಸ್ತಿ ಮುಂದುವರಿಯಲಿದೆ.
ಆರು ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಕೊನೆಗೂ ಬಿಜೆಪಿ ಒಪ್ಪಿಕೊಂಡಿದೆ. ಆ ಮೂಲಕ ಜೆಡಿಎಸ್ ಜತೆಗಿನ ಮೈತ್ರಿ ಕಡಿದುಕೊಳ್ಳುವುದಿಲ್ಲ ಎಂಬ ಸಂದೇಶ ನೀಡಿದೆ.
ನೆನ್ನೆ ಬಿಜೆಪಿ, ಪರಿಷತ್ ಸ್ಥಾನದ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿತ್ತು. ಜೆಡಿಎಸ್‌ಗೆ ಒಂದು ಸ್ಥಾನ ಮಾತ್ರವೇ ಬಿಟ್ಟುಕೊಡುವುದು ಬಿಜೆಪಿ ಉದ್ದೇಶವಾಗಿತ್ತು. ಆದರೆ, ಜೆಡಿಎಸ್ ವರಿಷ್ಠರು ಎರಡು ಸ್ಥಾನ ಬಿಟ್ಟುಕೊಡುವಂತೆ ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಳಿ ಮಾತನಾಡಿ, ಅಂತಿಮವಾಗಿ ಎರಡು ಸಥಾನಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ದಕ್ಷಿಣ ಶಿಕ್ಷಕರ ಕ್ಷೇತ್ರ, ನೇರುತ್ಯ ಶಿಕ್ಷಕರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಬಿಜೆಪಿ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಇ.ಸಿ.ನಿಂಗರಾಜು ಅವರಿಗೆ ನೀಡಿದ್ದ ಟಿಕೆಟ್ ವಾಪಸ್ ಪಡೆದಿದೆ. ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಭೋಜೇಗೌಡ ಅವರಿಗೆ ಭಿ ಪಾರಂ ಈಗಾಗಲೇ ವಿತರಣೆ ಮಾಡಿರುವ ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಕುಮಾರಸ್ವಾಮಿ, ದಕ್ಷಿಣ ಶಿಕ್ಷಕರಕ್ಷೇತ್ರದಲ್ಲಿ ಶ್ರೀಕಂಠೇಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಿದ್ದಾರೆ.
ಬಿಜೆಪಿ ಈಶಾನ್ಯ ಪದವೀಧರರ ಕ್ಷೇತ್ರಕ್ಕೆ ಅಮರ್‌ನಾಥ್ ಪಾಟೀಲ್, ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಡಾ.ಧನಂಜಯ ಸರ್ಜಿ, ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಅ.ದೇವೇಗೌಡ, ಆಗ್ನೇಯ ಶಿಕ್ಷಕ ಕ್ಷೇತ್ರಕೆಕ ವೈ.ಎ.ನಾರಾಯಣ ಸ್ವಾಮಿ ಅವರಿಗೆ ಟಿಕೆಟ್ ನೀಡಿದೆ.
ಚೌಕಾಸಿ ಮಾಡಿದ ಎಚ್‌ಡಿಡಿ,ಎಚ್‌ಡಿಕೆ !
ಒಂದು ಕ್ಷೇತ್ರವನ್ನಷ್ಟೇ ಮಿತ್ರ ಪಕ್ಷಕ್ಕೆ ಬಿಟ್ಟು ಐದು ಕ್ಷೇತ್ರದ ಅಭ್ಯರ್ಥಿಗಳ ಘೋಷಣೆ ಮಾಡಿದ್ದ ಬಿಜೆಪಿ ನಿರ್ಧಾರವನ್ನು ಪ್ರಶ್ನಿಸಿ, ಮಾಜಿ ಪ್ರಧಾನಿ ದೇವೇಗೌಡರು ರಾಷ್ಟೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜತೆಗೆ ಮಾತನ್ನಾಡಿದ್ದರು. ಕುಮಾರಸ್ವಾಮಿ ಬಿ.ವೈ ವಿಜಯೇಂದ್ರ ಜತೆಗೆ ಮಾತನಾಡುವ ಮೂಲಕ ರಾಷ್ಟೀಯ ನಾಯಕರ ಅನುಮತಿ ಪಡೆದು ಅಂತಿಮವಾಗಿ ಎರಡು ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ.