ರಾಜಕೀಯ ಸುದ್ದಿ

ಅರವಿಂದ ಕೇಜ್ರಿವಾಲ್‌ಗೆ ಹುಚ್ಚು, ಬಿಜೆಪಿಯಲ್ಲಿ ವಯಸ್ಸಿನ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ

Share It

ಬೆಂಗಳೂರು: ಅರವಿಂದ ಕೇಜ್ರಿವಾಲ್‌ ಬಹಳ ದಿನ ಜೈಲಲ್ಲಿದ್ದಿದ್ದರಿಂದ ಹುಚ್ಚರಂತೆ ವರ್ತಿಸುತ್ತಿದ್ದಾರೆ. ವಯಸ್ಸಿನ ಆಧಾರದ ಮೇಲೆ ಟಿಕೆಟ್ ನೀಡುವ ಕುರಿತು ಬಿಜೆಪಿಯಲ್ಲಿ ತೀರ್ಮಾನ ಕೈಗೊಂಡಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಇಂಡಿಯಾ ಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಅವರಿಗೆ ಗೊತ್ತಿಲ್ಲ. ಈಗಾಗಲೇ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ನಿಶ್ಚಿತವಾಗಿದೆ. 75 ವರ್ಷ ಕಳೆದವರಿಗೆ ಟಿಕೆಟ್‌ ನೀಡಲಾಗುತ್ತಿದೆ. ಟಿಕೆಟ್‌ ನೀಡುವುದಿಲ್ಲ ಎಂಬ ನಿರ್ಧಾರ ಪಕ್ಷದಲ್ಲಿ ಆಗಿಲ್ಲ. ಇದನ್ನು ಕಾಂಗ್ರೆಸ್‌ನವರೇ ಸೃಷ್ಟಿ ಮಾಡಿಕೊಂಡಿದ್ದಾರೆ. ಕೇಜ್ರಿವಾಲ್‌ ಮರಳಿ ಜೈಲಿಗೆ ಹೋಗಬೇಕಿದೆ. ಅವರು ಮತ್ತೆ ಬಿಡುಗಡೆಯಾಗುವುದಿಲ್ಲ ಎಂದರು.

ಅವರು ತಪ್ಪು ಮಾಡಿಲ್ಲವಾದರೆ ನ್ಯಾಯಾಲಯ ಕೂಡಲೇ ಜಾಮೀನು ನೀಡುತ್ತದೆ. ಲಾಲೂ ಪ್ರಸಾದ್‌ ಕೂಡ ಜೈಲಿಗೆ ಹೋಗಿದ್ದಾರೆ. ಜಾಮೀನು ಸಿಕ್ಕಿಲ್ಲ ಎಂದಾದರೆ ಅದಕ್ಕೆ ಸೂಕ್ತವಾದ ಪುರಾವೆ ಇದೆ ಎಂದರ್ಥ. ಅನೇಕ ವಿರೋಧ ಪಕ್ಷಗಳಿದ್ದರೂ ತಪ್ಪು ಮಾಡಿದವರು ಮಾತ್ರ ಜೈಲಿಗೆ ಹೋಗಿದ್ದಾರೆ ಎಂದರು.

ವಿಧಾನಪರಿಷತ್‌ ಚುನಾವಣೆಯಲ್ಲಿ ಹೊಂದಾಣಿಕೆ ದೃಷ್ಟಿಯಿಂದ ಪಕ್ಷದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಕೇಂದ್ರದ ನಾಯಕರು ನಿರ್ಧಾರ ಮಾಡಿದ್ದಾರೆ. ಇದರಲ್ಲಿ ರಾಜ್ಯದ ನಾಯಕರ ಪಾತ್ರವಿಲ್ಲ. ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಜೆಡಿಎಸ್‌ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡುತ್ತದೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ನಾವು ಆಗ್ರಹಿಸುತ್ತೇವೆ ಎಂದರು.

ಎಸ್.ಎಂ.ಕೃಷ್ಣ ಆರೋಗ್ಯ ವಿಚಾರಿಸಿದ ಆರ್.ಅಶೋಕ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿದ ಅವರು, ಎಸ್‌.ಎಂ.ಕೃಷ್ಣ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ನಮ್ಮ ನಾಡಿನ ಮುತ್ಸದ್ಧಿಯಾಗಿದ್ದು, ದೇವರ ಆಶೀರ್ವಾದ ಇದೆ. ನಾವು ಕೂಡ ಅವರ ಆರೋಗ್ಯಕ್ಕೆ ಪ್ರಾರ್ಥಿಸುತ್ತೇವೆ ಎಂದರು.


Share It

You cannot copy content of this page