ಬೆಂಗಳೂರು, (ಮೇ 12): ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಎಸ್ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಇತ್ತ ರಾಜ್ಯ ರಾಜಕಾರಣದಲ್ಲಿ ಪ್ರಜ್ವಲ್ ವಿಡಿಯೋ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವೆ ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಆದ್ರೆ, ಪ್ರಕರಣ ಆರೋಪಿ ಪ್ರಜ್ವಲ್ ರೇವಣ್ಣ ಮಾತ್ರ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಇಂದು ಬರಬಹುದು, ನಾಳೆ ಬರಬಹುದು ಎಂದು ಎಸ್ಐಟಿ ಅಧಿಕಾರಿಗಳು ಕಾಯುತ್ತಿದ್ದಾರೆ.
ಈಗಾಗಲೇ ಜರ್ಮನಿಯಿಂದ ಬೆಂಗಳೂರಿಗೆ ಬರಲು ಬುಕ್ ಮಾಡಿದ್ದ ವಿಮಾನ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಅಲ್ಲದೇ ಇದೀಗ ಮೇ 14ರಂದು ಬುಕ್ ಮಾಡಿದ್ದ ಟಿಕೆಟ್ ಅನ್ನು ಸಹ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ.
ನಾಳೆ ಅಂದ್ರೆ ಮೇ 13ರಂದು ತಂದೆ ರೇವಣ್ಣರ ಜಾಮೀನು ನೋಡಿ ಮುಂದಿನ ನಿರ್ಧಾರ ಕೈಗೊಳ್ಳಲು ಪ್ರಜ್ವಲ್ ಪ್ಲಾನ್ ಮಾಡಿಕೊಂಡಿದ್ದಾರೆ. ಒಂದು ವೇಳೆ ತಂದೆಗೆ ಜಾಮೀನು ಸಿಕ್ಕರೆ ಬೆಂಗಳೂರಿಗೆ ಬರುವ ಸಾಧ್ಯತೆಗಳಿವೆ. ಇಲ್ಲದಿದ್ದರೆ ಇನ್ನೊಂದಷ್ಟು ದಿನ ವಿದೇಶದಲ್ಲೇ ಠಿಕಾಣಿ ಹೂಡಲಿದ್ದಾರೆ.
ಮೂಲಗಳ ಪ್ರಕಾರ ಪ್ರಜ್ವಲ್ ರೇವಣ್ಣ, ಜರ್ಮನಿಯ ಮ್ಯೂನಿಚ್ ನಗರಕ್ಕೆ ತೆರಳಿ ಅಲ್ಲಿಂದ ಜರ್ಮನಿಯ ವಿವಿಧ ಪ್ರದೇಶಗಳಲ್ಲಿ ಗುಪ್ತವಾಗಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೂ ಮುನ್ನ ಒಂದೆರಡು ಬಾರಿ ಮ್ಯೂನಿಚ್ ನಗರದಿಂದ ಬೆಂಗಳೂರಿಗೆ ಬರಲು ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದರೂ ತಂದೆ ರೇವಣ್ಣ ಅರಸ್ಟ್ ಆದ ನಂತರ ಫ್ಲೈಟ್ ಟಿಕೆಟ್ ಕ್ಯಾನ್ಸಲ್ ಮಾಡಿ ಮತ್ತೆ ಜರ್ಮನಿಯಲ್ಲೇ ಗುಪ್ತವಾಗಿ ಅಜ್ಞಾತ ವಾಸದಲ್ಲಿದ್ದಾರೆ ಎಂದು ತಿಳಿದುಬಂದಿದೆ.