ಚಾಮರಾಜನಗರ: ಒಂದು ತಿಂಗಳ ಕಾಲಾವಧಿಯಲ್ಲಿಯೇ ಮಲಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ೩.೦೪ ಕೋಟಿ ರು. ಹಣ ಸಂಗ್ರಹವಾಗುವ ಮೂಲಕ ದಾಖಲೆ ಬರೆದಿದೆ.
ಶಕ್ತಿ ಯೋಜನೆಯ ಎಫೆಕ್ಟ್ನಿಂದ ಈ ದಾಖಲೆ ಸಾಧ್ಯವಾಗಿದ್ದು, ಉಚಿತ ಬಸ್ ಪ್ರಯಾಣದಿಂದಾಗಿ ಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳ ಸಂಖ್ಯೆ ಹೆಚ್ಚಳವಾಗಿದೆ. ಉಚಿತ ಬಸ್ ಪ್ರಯಾಣದಿಂದ ಉಳಿಸಿದ ಹಣವನ್ನು ಹೆಚ್ಚಾಗಿ ಮಹಿಳೆಯರು ಹುಂಡಿಗೆ ಹಾಕುವ ಮೂಲಕ ದೇವರಿಗೆ ಮತ್ತು ಸರಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.
ಹನೂರು ತಾಲೂಕಿನ ಶ್ರೀ ಮಲೆಮಹದೇಶ್ವರ ಬೆಟ್ಟದಲ್ಲಿ ಸೋಮವಾರ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, ೩೪ ದಿನಗಳ ಅವಧಿಯಲ್ಲಿ ಹುಂಡಿಯಲ್ಲಿ ೩.೦೪ ಕೋಟಿ ರೂ. ಸಂಗ್ರಹವಾಗಿದೆ. ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ, ಸೋಮವಾರ ಬೆಳಗ್ಗೆ ೮ ಗಂಟೆಯಿAದ ಹುಂಡಿ ಎಣಿಕೆ ಕಾರ್ಯ ನಡೆಯಿತು.
ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ಪ್ರಾರಂಭಿಸಲಾಯಿತು. ಎಣಿಕೆ ಕಾರ್ಯವು ರಾತ್ರಿ ೧೧.೩೦ಕ್ಕೆ ಮುಕ್ತಾಯವಾಗಿದ್ದು, ಈ ಬಾರಿ ಯುಗಾದಿ ಜಾತ್ರಾ ಮಹೋತ್ಸವ, ಸರ್ಕಾರಿ ರಜಾ ದಿನಗಳು ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.
ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆಯ ರೂಪದಲ್ಲಿ ಹಣ ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ. ಈ ಬಾರಿ ೩,೦೪,೫೭,೨೪೬ ರೂ. ನಗದು ಸಂಗ್ರಹವಾಗಿದೆ. ಚಿನ್ನ ೧೧೫ ಗ್ರಾಂ ಮತ್ತು ಬೆಳ್ಳಿ ೨ ಕೆಜಿ ೯೬೪ ಗ್ರಾಂ ಸಂಗ್ರಹವಾಗಿದೆ. ಇದಲ್ಲದೇ ಸಿಂಗಾಪುರ, ಅಮೆರಿಕದ ೨೭ ವಿದೇಶಿ ನೋಟುಗಳು, ಚಲಾವಣೆಯಲ್ಲಿಲ್ಲದ ೨,೦೦೦ ಮುಖಬೆಲೆಯ ೨೨ ನೋಟುಗಳು ಪತ್ತೆಯಾಗಿವೆ.
ಇ-ಹುಂಡಿಯಲ್ಲಿ ೩,೫೩,೪೪೧ ಕೂಡ ಸಂಗ್ರಹವಾಗಿದೆ ಎಂದು ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಮಾಹಿತಿ ನೀಡಿದ್ದಾರೆ.