ಉಪಯುಕ್ತ ಸುದ್ದಿ

ಪತ್ರಿಕೋದ್ಯಮ ಶಿಕ್ಷಣದ ಗಾರುಡಿಗ ಪ್ರೊ. ನರಸಿಂಹಮೂರ್ತಿಯವರಿಗೆ ಗುರು ವಂದನೆ

Share It

ಬೆಂಗಳೂರು: ಮೂರು ದಶಕಗಳಿಂದ ಪತ್ರಿಕೋದ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಅಮೋಘ ಸೇವೆ ಸಲ್ಲಿಸಿದ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ನರಸಿಂಹ ಮೂರ್ತಿಯವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಿ ಗೌರವಿಸಲಾಯಿತು.

ಬೆಂಗಳೂರು ನಗರ ವಿಶ್ವ ವಿದ್ಯಾನಿಲಯದ ಹಂಗಾಮಿ ಕುಲಪತಿಗಳಾಗಿ, ಸಿಂಡಿಕೇಟ್ ಸದಸ್ಯರಾಗಿ, ಕಲಾ ವಿಭಾಗದ ಡೀನರಾಗಿ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವರಾಗಿಯೂ ದಕ್ಷತೆಯಿಂದ ಕಾರ್ಯನಿರ್ವಹಿಸಿದ ಪ್ರೊ. ನರಸಿಂಹಮೂರ್ತಿಯವರು ಮಾದರಿ ಶಿಕ್ಷಕರಾಗಿ ಗುರು ಪರಂಪರೆಯ ಪ್ರತೀಕವಾಗಿದ್ದಾರೆಂದು ಹಿರಿಯ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಎಚ್.ಎಸ್. ಈಶ್ವರ್ ಪ್ರಶಂಸಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಬಿಸಿಯು ಪತ್ರಿಕೋದ್ಯಮ ವಿಭಾಗವನ್ನು ಅಭಿವೃದ್ಧಿಪಡಿಸಿ ಅಪಾರ ಸಂಖ್ಯೆಯ ಪತ್ರಕರ್ತರನ್ನು ತರಬೇತುಗೊಳಿಸಿ ಮಾಧ್ಯಮ ಕ್ಷೇತ್ರಕ್ಕೆ ಒದಗಿಸುವ ಕಾರ್ಯದಲ್ಲಿ ಪ್ರೊ.ನರಸಿಂಹ ಮೂರ್ತಿಯವರು ಪ್ರಮುಖ ಪಾತ್ರ ವಹಿಸಿದ್ದಾರೆಂದು ಪ್ರೊ. ಈಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಪ್ರೊ. ಟಿ.ಡಿ. ಕೆಂಪರಾಜುರವರು ಮಾತನಾಡಿ ವಿವಿಧ ಉನ್ನತ ಹುದ್ದೆಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿ ಅಧ್ಯಯನ ಮತ್ತು ಸಂಶೋಧನೆಯ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿರುವ ಪ್ರೊ. ನರಸಿಂಹ ಮೂರ್ತಿಯವರ ಗುಣಗಾನ ಮಾಡಿದರು.

ಕುಲಸಚಿವರಾದ ಟಿ. ಜವರೇಗೌಡರು ಮಾತನಾಡಿ ನೇರ ನಡೆನುಡಿಯ ನಿಷ್ಠುರವಾದಿ ವ್ಯಕ್ತಿತ್ವದ ಪ್ರೊ. ನರಸಿಂಹ ಮೂರ್ತಿಯವರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆಂದು ತಿಳಿಸಿದರು. ಸಮಾಜಮುಖಿ ಚಿಂತನೆಯ ಪ್ರೊ. ನರಸಿಂಹಮೂರ್ತಿಯವರು ಅನ್ಯಾಯದ ವಿರುದ್ಧ ದನಿ ಎತ್ತುವ ಮೂಲಕ ಸಾಮಾಜಿಕ ನ್ಯಾಯದ ಗುರಿ ಸಾಧನೆಗೆ ಸದಾ ಶ್ರಮಿಸುವ ವ್ಯಕ್ತಿಯಾಗಿದ್ದಾರೆಂದು ಅವರು ನುಡಿದರು.

ಕುಲಸಚಿವ (ಮೌಲ್ಯಮಾಪನ) ಡಾ. ಸಿ.ಎಸ್. ಆನಂದ ಕುಮಾರ್ , ವಿತ್ತಾಧಿಕಾರಿ ವಿಜಯಲಕ್ಷ್ಮಿ ಸಹಿತ ಅನೇಕ ಪ್ರಮುಖರು ಪ್ರೊ. ನರಸಿಂಹ ಮೂರ್ತಿಯವರಿಗೆ ಶುಭ ಹಾರೈಸಿದರು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಪ್ರೊ.ನರಸಿಂಹ ಮೂರ್ತಿಯವರು ಡಾ. ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಮತ್ತು ಆದರ್ಶದಂತೆ ಸಾಮಾಜಿಕ ಸಮಾನತೆಯ ಗುರಿ ಸಾಧನೆಗೆ ಪರಿಶ್ರಮಿಸುವ ಸಂಕಲ್ಪ ಪ್ರಕಟಿಸಿದರು. ಇತಿಹಾಸ ವಿಭಾಗದ ಅಧ್ಯಾಪಕಿ ಡಾ. ಮಾಲಿನಿ ಕಾರ್ಯಕ್ರಮ ನಿರೂಪಿಸಿದರು. ಡಾ. ಪುರುಷೋತ್ತಮ ಸ್ವಾಗತಿಸಿ ವಂದಿಸಿದರು.

ಕುಲಪತಿಯವರ ಶುಭ ಹಾರೈಕೆ: ವಿಶ್ವ ವಿದ್ಯಾನಿಲಯದ ಪ್ರತಿಷ್ಠಿತ ವಿಭಾಗದ ಮುಖ್ಯಸ್ಥರಾಗಿ ಮೂರು ದಶಕಗಳಿಗೂ ಹೆಚ್ಚುಕಾಲ ಸೇವೆ ಸಲ್ಲಿಸಿದ ಪ್ರೊ. ನರಸಿಂಹಮೂರ್ತಿಯವರಿಗೆ ಬಿಸಿಯು ಕುಲಪತಿಗಳಾದ ಪ್ರೊ.ಲಿಂಗರಾಜ ಗಾಂಧಿಯವರು ಅನಂತ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಸಮೂಹ ಸಂವಹನ ವಿಭಾಗವನ್ನು ಆಧುನಿಕ ತಂತ್ರಜ್ಞಾನ ಮೂಲಸೌಕರ್ಯಗಳಿಂದ ಸಜ್ಜುಗೊಳಿಸಿ ಸಮರ್ಥ ಮಾರ್ಗದರ್ಶನದ ಮೂಲಕ ಹಲವಾರು ಶ್ರೇಷ್ಠ ಪತ್ರಕರ್ತರನ್ನು ತರಬೇತುಗೊಳಿಸಿದ ಪ್ರೊ.ನರಸಿಂಹ ಮೂರ್ತಿಯವರ ಕೊಡುಗೆಯನ್ನು ಗೌರವದಿಂದ ಸ್ಮರಿಸುವುದಾಗಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಪ್ರೊ. ಮೂರ್ತಿಯವರ ನಿವೃತ್ತ ಜೀವನ ಸಂತೋಷದಾಯಕ ವಾಗಿರಲೆಂದು ಅವರು ಇದೇ ವೇಳೆ ಹಾರೈಸಿದ್ದಾರೆ.


Share It

You cannot copy content of this page