ಕೊಪ್ಪಳ: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಅನುಭವ ಕಾಂಗ್ರೆಸ್‌ಗಿದೆ. ದೇಶದಲ್ಲೂ ಗ್ಯಾರಂಟಿ ಜಾರಿಗೆ ತರುವುದು ಹೇಗೆ ಎಂಬುದು ನಮಗೆ ಗೊತ್ತಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್ ಹೇಳಿದ್ದ ವೇಳೆ, ಬಿಜೆಪಿ ನಾಯಕರು ಅದು ಹೇಗೆ ಗ್ಯಾರಂಟಿ ಯೋಜನೆಗಳು ಜಾರಿಗೆ ಬರುತ್ತವೆಯೊ ನೋಡುತ್ತೇವೆ ಎಂದಿದ್ದರು. ಈಗ ರಾಷ್ಟ್ರದಲ್ಲಿ ಗ್ಯಾರಂಟಿ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದ್ದರೆ ಬಿಜೆಪಿ ಮತ್ತದೇ ಹಳೇ ರಾಗ ಮುಂದುವರಿಸಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಬೇಕಾದರೆ ಯಾರ‌್ಯಾರಿಗೆ, ಯಾವ್ಯಾವುದಕ್ಕೆ ತೆರಿಗೆ ವಿಧಿಸಬೇಕು ಎಂಬುದು ನಮಗೆ ಗೊತ್ತಿದೆ. ಅನೇಕ ಅರ್ಥಶಾಸ್ತ್ರಜ್ಞರು, ಆರ್ಥಿಕ ತಜ್ಞರು ಇರುವ ಪಕ್ಷ ಕಾಂಗ್ರೆಸ್ ಎಂದು ಬಿಜೆಪಿ ವಿರುದ್ಧ ಹರಿಹಾಯ್ಧರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲು ಹಣವನ್ನು ಇಳಿಕೆ ಮಾಡಿದ್ದು ಬಿಜೆಪಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಆ ಮೀಸಲು ಹಣವನ್ನು ಹೆಚ್ಚಿಸಿ ದೀನದಲಿತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಬಿಜೆಪಿಯವರಿಗೆ ಈ ಬಗ್ಗೆ ಜ್ಞಾನವಿಲ್ಕ. ಚುನಾವಣೆಗೋಸ್ಕರ ಜಾತಿ-ಧರ್ಮಗಳಲ್ಲಿ ಒಡಕುಂಟು ಮಾಡುವ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ ಎಂದು ಕಿಡಿ ಕಾರಿದರು.
ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಅತ್ಯಂತ ಗೌರವದಿಂದ ಕಂಡಿದೆ. ಅವರ ಸಮಾಧಿ ವಿಷಯವಾಗಿ ಸುಳ್ಳು ಸಂಗತಿ ಪ್ರಸ್ತಾಪಿಸಿ ಕಾಂಗ್ರೆಸ್‌ಗೆ ಹಿನ್ನಡೆ ತರುವ ಬಿಜೆಪಿ ಕನಸು ನನಸಾಗುವುದಿಲ್ಲ. ಕಾಂಗ್ರೆಸ್‌ನ ಗರ್ಭಗುಡಿಯಲ್ಲಿ ಅಂಬೇಡ್ಕರ್, ಬಸವಣ್ಣನವರ ಭಾವಚಿತ್ರಗಳಿವೆ. ಬಿಜೆಪಿ ಗರ್ಭಗುಡಿಯಲ್ಲಿ ಅಂಬೇಡ್ಕರ್ ಭಾವಚಿತ್ರ ಇದೆಯಾ? ಎಂದು ಆಂಜನೇಯ ಪ್ರಶ್ನಿಸಿದರು.
ಈ ವೇಳೆ ಶಾಸಕ ರಾಘವೇಂದ್ರ ಹಿಟ್ನಾಳ, ಮುಖಂಡರಾದ ಅಮರೇಶ ಕರಡಿ, ಗೂಳಪ್ಪ ಹಲಗೇರಿ, ಕೃಷ್ಣ ಗಲಭಿ, ಎಸ್.ಬಿ.ನಾಗರಳ್ಳಿ ಮತ್ತಿತರರು ಇದ್ಧರು.