ಬಿಸಿಲಿಗೆ ಕಾದು ಕೆಂಡದಂತಾಗಿದ್ದ ಬೆಂಗಳೂರಿಗೆ ಕಳೆದ 3 ದಿನಗಳಲ್ಲಿ ಸತತವಾಗಿ ಮಳೆ ಸುರಿದಿದೆ. ನಿನ್ನೆ ಸೋಮವಾರವೂ ಸಹ ಗಂಟೆಗಟ್ಟಲೆ ಮಳೆ ಸುರಿದಿದೆ. ಇಂದು ಕೂಡ ಮಳೆ ಮುಂದುವರೆಯಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.
ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನದ ಬಳಿಕ ಮಳೆ ಶುರುವಾಗಲಿದೆ.ಮೇ 13ರವರೆಗೂ ಮಳೆ ಮುಂದುವರೆಯಲಿದೆ. ಇಂದು ಮತ್ತು ನಾಳೆ ಚಾಮರಾಜನಗರ ಹಾಗೂ ರಾಮನಗರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಒಂದೆರಡು ಸ್ಥಳಗಳಲ್ಲಿ ಆಲಿಕಲ್ಲು ಮಳೆಯಾಗಲಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಅಂಕಿಅಂಶಗಳ ಪ್ರಕಾರ,ನಿನ್ನೆ ಸೋಮವಾರ ರಾತ್ರಿ 9 ಗಂಟೆ ವೇಳೆಗೆ ರಾಜಮಹಲ್ ಗುಟ್ಟಹಳ್ಳಿಯಲ್ಲಿ ಗರಿಷ್ಠ 39.5 ಮಿಮೀ ಮಳೆಯಾಗಿದ್ದು, ನಂತರದ ದಯಾನಂದ ನಗರದಲ್ಲಿ 32.5 ಮಿಮೀ ಮಳೆಯಾಗಿದೆ. ನಗರದ 18 ವಾರ್ಡ್‌ಗಳಲ್ಲಿ 10 ಮಿ.ಮೀಗೂ ಹೆಚ್ಚು ಮಳೆಯಾಗಿದೆ.
ವಲಯವಾರು ಪ್ರಕಾರ ಬೊಮ್ಮನಹಳ್ಳಿಯಲ್ಲಿ ಗರಿಷ್ಠ ಮಳೆಯಾಗಿದ್ದು, ಯಲಹಂಕದಲ್ಲಿ ಅತಿ ಕಡಿಮೆ ಮಳೆಯಾಗಿದೆ. ಮಧ್ಯಾಹ್ನದ ವೇಳೆಗೆ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ತಾಪಮಾನ ತುಲನಾತ್ಮಕವಾಗಿ ಕಡಿಮೆ ಇತ್ತು. ಬೆಂಗಳೂರು ನಗರದಲ್ಲಿ ಮೇ 10 ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಧರೆಗುರುಳಿದ 25ಕ್ಕೂ ಹೆಚ್ಚು ಮರಗಳು: ಬೆಂಗಳೂರಿನಲ್ಲಿ ಸೋಮವಾರ ಮಳೆಯ ಅಬ್ಬರ ಜೋರಾಗಿಯೇ ಇತ್ತು. ಸಂಜೆ 6 ಗಂಟೆಗೆ ಗುಡುಗು ಸಹಿತ ಸುರಿದ ಮಳೆಗೆ ನಗರದ ಹಲವು ಕಡೆ ಅವಾಂತರಗಳೇ ಆದವು. 25ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಬಿಟಿಎಂ ಲೇಔಟ್, ಯಶವಂತಪುರ, ಜಯನಗರ, ಕೋರಮಂಗಲ, ಬಸವನಗುಡಿ, ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಸುರಿದ ಮಳೆಗೆ ವಾಹನ ಸವಾರರು ಹೈರಾಣಾಗಿ ಹೋದರು.
ಮಳೆಯಿಂದಾಗಿ ಕಾರು ಪಲ್ಟಿಯಾಗಿ ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ಜಿಎನ್ ನಂಜುಂಡಸ್ವಾಮಿ ಗಾಯಗೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಅಪಘಾತ ಸಂಭವಿಸಿದ್ದು, ನಂಜುಂಡಸ್ವಾಮಿ ತಲೆಗೆ ಏಟಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದೆ, ಕೆಲವು ಪ್ರದೇಶಗಳಲ್ಲಿ ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ.