ರಾಜಕೀಯ ಸುದ್ದಿ

ಭಾಲ್ಕಿಯಲ್ಲಿ ಖಂಡ್ರೆ ಕುಟುಂಬದಿಂದ ತಾತ, ಮಗ, ಮೊಮ್ಮಗ ಮತದಾನ

Share It

ಮತ ಹಕ್ಕು ಚಲಾಯಿಸಿದ ಭೀಮಣ್ಣ ಖಂಡ್ರೆ, ಈಶ್ವರ ಖಂಡ್ರೆ, ಸಾಗರ್ ಖಂಡ್ರೆ
ಭಾಲ್ಕಿ, ಮೇ 7: ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಂಡ್ರೆ ಕುಟುಂಬದಿಂದ ತಾತ, ಮಗ, ಮೊಮ್ಮಗ ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಭಾಲ್ಕಿಯಲ್ಲಿ ಮತ ಚಲಾಯಿಸಿದ್ದು, ಈ ಅಪರೂಪದ ಘಟನೆಗೆ ಹಲವರು ಸಾಕ್ಷಿಯಾದರು.

ಮಾಜಿ ಸಾರಿಗೆ ಸಚಿವರು, ಸ್ವಾತಂತ್ರ್ಯ ಹೋರಾಟಗಾರರು, ಏಕೀಕರಣ ಚಳವಳಿಯ ನೇತಾರರು ಹಾಗೂ ಲೋಕನಾಯಕ ಶತಾಯುಷಿ ಡಾ. ಭೀಮಣ್ಣ ಖಂಡ್ರೆ ಅವರು ವಾರ್ಧಕ್ಯದ ನಡುವೆಯೂ ಉತ್ಸಾಹದಿಂದ ಗಾಲಿ ಕುರ್ಚಿಯಲ್ಲಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹಾಗೂ ಅವರ ಪುತ್ರ ಮತ್ತು ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಈಶ್ವರ್ ಖಂಡ್ರೆ ಅವರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ನೂತನ ಕಚೇರಿಯ ಸಭಾ ಭವನದ ಮತಗಟ್ಟೆ ಸಂಖ್ಯೆ 118ರಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಖಂಡ್ರೆ ಕುಟುಂಬದ ಇತರ ಸದಸ್ಯರೂ ಇದೇ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಮತಗಟ್ಟೆಯಿಂದ ಹೊರ ಬಂದ ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮತದಾನ ಅತ್ಯಂತ ಪವಿತ್ರವಾಗಿದ್ದು, ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ ಎಂದು ಮನವಿ ಮಾಡಿದರು.


Share It

You cannot copy content of this page