ಚಿಕ್ಕಮಗಳೂರು: ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯ ಅಬ್ಬರ ಜೋರಾಗಿದೆ. ಅದರಂತೆ ಇಂದು ಮಟ ಮಟ ಮಧ್ಯಾಹ್ನವೇ ಚಿಕ್ಕಮಗಳೂರಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಬಂದಿದೆ.
ಕಳೆದ ಅರ್ಧ ಗಂಟೆಯಿಂದ ಸುರಿಯುತ್ತಿರುವ ಆಲಿಕಲ್ಲು ಮಳೆಗೆ ವಾಹನ ಸವಾರರು, ರಸ್ತೆ ಬದಿ ವ್ಯಾಪಾರಿಗಳಿಗೆ ತೊಂದರೆ ಉಂಟಾಗಿದೆ. ಇದರಿಂದ ಬಿಸಿಲಿನಿಂದ ಕಂಗಟ್ಟಿದ್ದ ಜನರು, ದಿಢೀರ್ ಮಳೆಯಿಂದ ಸಂತಸಗೊಂಡಿದ್ದಾರೆ.
ಇತಿಹಾಸದಲ್ಲೇ ಮೊದಲ ಬಾರಿಗೆ ಕಂಡೂ ಕೇಳರಿಯದಷ್ಟು ಪ್ರಮಾಣದಲ್ಲಿ ಏರಿಕೆಯಾಗಿದ್ದ ಬಿಸಿಲ ತಾಪದಿಂದ ಚಿಕ್ಕಮಗಳೂರು ಜಿಲ್ಲೆಯ ಜನರು ಬಳಲಿ ಬೇಸತ್ತು ಹೋಗಿದ್ದರು. ಈ ಹಿನ್ನಲೆ ಮಲೆನಾಡಿಗರು ಕೆಲ ದಿನಗಳಿಂದ ದೇವರ ಪೂಜೆ, ಹೋಮ-ಹವನ ನಡೆಸುವ ಮೂಲಕ ವರುಣದೇವನ ಮೊರೆ ಹೋಗಿದ್ದು, ಮಲೆನಾಡಿಗರ ಪೂಜೆಯ ಫಲವೋ ಅಥವಾ ಪ್ರಕೃತಿ ಸೌಂದರ್ಯದ ಮೇಲಿನ ವ್ಯಾಮೋಹವೋ ಎಂಬಂತೆ ಕಳೆದೊಂದು ವಾರದಿಂದ ಸಂಜೆಯಾಗುತ್ತಿದ್ದಂತೆ ನಿರಂತರವಾಗಿ ಮಳೆಯಾಗುತ್ತಿದೆ.
ಇದರಿಂದಾಗಿ ಮಲೆನಾಡಲ್ಲಿ ಬಿಸಿಲ ತಾಪ ಸ್ವಲ್ಪಮಟ್ಟಿಗೆ ಇಳಿಕೆಯಾಗಿದ್ದು, ಮಲೆನಾಡಿಗರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಆದ್ರೆ, ಮಳೆಗಾಲ ಆರಂಭಕ್ಕೂ ಮುನ್ನ ಈ ಬಾರಿ ಬಿರುಗಾಳಿ ಸಹಿತ ಮಳೆಗೆ ಇಬ್ಬರು ಬಲಿಯಾಗಿದ್ದು, ಮಲೆನಾಡು ಭಾಗ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಜನರು ಬಿರುಗಾಳಿ, ಗುಡುಗು ಮಿಂಚಿಗೆ ಕಂಗಾಲಾಗಿದ್ದಾರೆ.