ಹುಬ್ಬಳ್ಳಿ: ಯುವತಿ ಮೇಲೆ ಹಲ್ಲೆ ನಡೆಸಿದ ಅನ್ಯ ಕೋಮಿನ ಯುವಕ ಅರೆಸ್ಟ್

32
Share It

ಹುಬ್ಬಳ್ಳಿ: ಹುಬ್ಬಳ್ಳಿಯ ಬಿವಿಬಿ ಕಾಲೇಜು ಕ್ಯಾಂಪಸ್​ನಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹತ್ಯೆ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ.

ಇದೀಗ ಇದೇ ರೀತಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಹುಬ್ಬಳ್ಳಿ ನಗರದಲ್ಲಿ ಹಿಂದೂ ಯುವತಿ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ ಆರೋಪ ಮಾಡಲಾಗಿದೆ. ಅಫ್ತಾಬ್ ಎಂಬಾತನಿಂದ ಹಲ್ಲೆ ಆರೋಪ ಕೇಳಿಬಂದಿದ್ದು, ಸದ್ಯ ಹುಬ್ಬಳ್ಳಿಯ ಕೇಶ್ವಾಪುರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹಲ್ಲೆ ಮಾಡಿದ ಆರೋಪಿ ಅಫ್ತಾಬ್ ನನ್ನ ವಿಚಾರಣೆ ಮಾಡಿ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಹೇಳಿದ್ದಾರೆ.

ಸಂತ್ರಸ್ತ ಯುವತಿ ಅಫ್ತಾಬ್ ಜೊತೆ ಕೆಲ ದಿನಗಳಿಂದ ಸ್ನೇಹ ಹೊಂದಿದ್ದಾಳೆ. ಸ್ನೇಹದಿಂದ ಇದ್ದಾಗ ಯುವತಿಗೆ ಅಫ್ತಾಬ್ ಕೆಲವು ಗಿಫ್ಟ್​ಗಳನ್ನ ಕೊಟ್ಟಿದ್ದಾನೆ. ಗಿಫ್ಟ್ ವಾಪಸ್ ಕೊಡುವ ಸಮಯದಲ್ಲಿ ಹಲ್ಲೆ ಮಾಡಿರುವ ಆರೋಪ ಮಾಡಲಾಗಿದೆ. ಸದ್ಯ ಹಲ್ಲೆ ಆರೋಪ ಪ್ರಕರಣ ಕೇಶ್ವಾಪುರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಗಿಫ್ಟ್ ಸುಟ್ಟು ಹಾಕಿ ಬಳಿಕ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ: ಸಂತ್ರಸ್ತ ಯುವತಿ
ಹಲ್ಲೆಗೊಳಗಾದ ಸಂತ್ರಸ್ತ ಯುವತಿ ಪ್ರತಿಕ್ರಿಯಿಸಿದ್ದು, ಹಣ್ಣಿನ ಅಂಗಡಿ ವ್ಯಾಪಾರಿ ಅಫ್ತಾಬ್​ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ಮಾಡಿರುವ ಅಫ್ತಾಬ್ ನನಗೆ ಎರಡು ವರ್ಷದಿಂದ ಪರಿಚಯವಿದ್ದ. ಅಫ್ತಾಬ್ ಮತ್ತು ನನ್ನ ನಡುವೆ ಸ್ನೇಹವಿತ್ತು, ಪ್ರೀತಿಸುವಂತೆ ಪೀಡಿಸುತ್ತಿದ್ದ. ನನ್ನ ಮುಸ್ಲಿಂ ಗೆಳತಿ ಅಫ್ತಾಬ್​ನನ್ನು ಪರಿಚಯ ಮಾಡಿಕೊಟ್ಟಿದ್ದಳು ಎಂದಿದ್ದಾಳೆ.

ನನ್ನ ಬರ್ತ್​​ಡೇ ಮತ್ತು ರಂಜಾನ್​ಗೆ ಬಲವಂತವಾಗಿ ಗಿಫ್ಟ್ ಕೊಟ್ಟಿದ್ದ. ನೇಹಾ ಪ್ರಕರಣದ ಬಳಿಕ ಸ್ನೇಹ ಕಳೆದುಕೊಳ್ಳಲು ನಿರ್ಧಾರ ಮಾಡಿದ್ದೆ. ಇವತ್ತು ನನಗೆ ಕರೆ ಮಾಡಿ ಹಣ್ಣಿನ‌ ಅಂಗಡಿ ಬಳಿ ಬರಲು ತಿಳಿಸಿದ್ದ. ಅಫ್ತಾಬ್ ಅಂಗಡಿ ಹತ್ತಿರ ಹೋಗಿ ಆತನ ಗಿಫ್ಟ್ ವಾಪಸ್​ ನೀಡಿದೆ. ಆ ಗಿಫ್ಟ್ ಸುಟ್ಟು ಹಾಕಿ ಬಳಿಕ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಸ್ಥಳೀಯರು ಅಫ್ತಾಬ್​ನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿರುವ ಅಫ್ತಾಬ್​ಗೆ ಕಠಿಣ ಶಿಕ್ಷೆ ಆಗಬೇಕು ಎಂದು ಹಲ್ಲೆಗೊಳಗಾದ ಯುವತಿ ಒತ್ತಾಯಿಸಿದ್ದಾಳೆ.


Share It

You cannot copy content of this page