ಇತ್ತೀಚೆಗೆ ಚುನಾವಣೆ ನಡೆಯೋದೆ ದುಡ್ಡಿನ ಮೇಲೆ, ದುಡ್ಡಿಲ್ಲ ಅಂದ್ರೆ ಅವನೆಂತಹ ಸಭ್ಯಸ್ಥನಾದರೂ ಜನ ವೋಟ್ ಹಾಕಲ್ಲ, ಅಂತಹದ್ದರಲ್ಲಿ ಚುನಾವಣೆಯಲ್ಲಿ ದುಡ್ಡಿಲ್ಲದೆ ಟಿಕೆಟ್ ತಗೊಂಡ್ ಏನ್ಲಾ ಮಾಡ್ಲಿ ಅಂತ ತಮಗೆ ಕೊಟ್ಟಿದ್ದ ಟಿಕೆಟ್ ವಾಪಸ್ ಮಾಡಿರೋ ಘಟನೆ ಓಡಿಸ್ಸಾದಲ್ಲಿ ನಡೆದಿದೆ.
ಭುವನೇಶ್ವರ: ಚುನಾವಣೆಯಲ್ಲಿ ಖರ್ಚು ಮಾಡಲು ಹಣವಿಲ್ಲ ಎಂಬ ಕಾರಣಕ್ಕೆ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಚರಿತಾ ಮೋಹಂತಿ ತಮಗೆ ಪಕ್ಷ ನೀಡಿದ್ದ ಟಿಕೆಟ್ ವಾಪಸ್ ಮಾಡಿದ್ದಾರೆ ಎನ್ನಲಾಗಿದೆ.
ಚುನಾವಣೆಯಲ್ಲಿ ಸ್ಪರ್ಧಿಸಲು ಬೇಕಾದ ಹಣ ನನ್ನ ಬಳಿ ಇಲ್ಲ. ಪಕ್ಷವೂ ಹಣಕಾಸಿನ ನೆರವು ನೀಡಲಾಗಲ್ಲ ಎಂದಿದೆ. ಹೀಗಾಗಿ ಚುನಾವಣೆಯಿಂದ ಹಿಂದೆ ಸರಿದು ಸಾಮಾನ್ಯ ಕಾರ್ಯಕರ್ತೆಯಾಗಿ ಮುಂದುವರಿಯುತ್ತೇನೆ ಎಂದು ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಿರುವ ಮೋಹಂತಿ, ಪಕ್ಷವು ಹಣದ ನೆರವು ನಿರಾಕರಿಸಿದ್ದರಿಂದಾಗಿ ಪುರಿ ಲೋಕಸಭಾ ಕ್ಷೇತ್ರದಲ್ಲಿ ತನ್ನ ಪ್ರಚಾರಕ್ಕೆ ಭಾರೀ ಹೊಡೆತ ಬಿದ್ದಿದೆ. ಪಕ್ಷವು ನನಗೆ ಹಣ ನೀಡಲು ಸಾಧ್ಯವಾಗದ ಕಾರಣ ಟಿಕೆಟ್ ವಾಪಸ್ ನೀಡುತ್ತಿದ್ದೇನೆ ಎಂದು ಬೇಸರವ್ಯಕ್ತಪಡಿಸಿದ್ದಾರೆ.
ಮೂಲತಃ ಪತ್ರಕರ್ತೆಯಾದ ಸುಚರಿತಾ ಮೋಹಂತಿ, ಹತ್ತು ವರ್ಷದ ಹಿಂದಷ್ಟೇ ರಾಜಕೀಯ ಪ್ರವೇಶ ಮಾಡಿದ್ದರು. ಪ್ರಗತಿಪರ ರಾಜಕೀಯ ಸಿದ್ಧಾಂತ ರೂಪಿಸಬೇಕು ಎಂಬ ಕಾರಣಕ್ಕೆ ಪಾರದರ್ಶಕ ಚುನಾವಣೆ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಇವರ ಈ ನಡೆಯಿಂದ ಚುನಾವಣಾ ಖರ್ಚಿಗೂ ಹಣ ಸಿಗುತ್ತಿಲ್ಲ ಎನ್ನಲಾಗಿದೆ. ದೇಣಿಗೆ ಸಂಗ್ರಹ ಮಾಡಲು ಮುಂದಾದರಾದರೂ ಅದಕ್ಕೂ ಉತ್ತಮ ಸ್ಪಂದನೆ ಸಿಕ್ಕಿಲ್ಲ. ಜತೆಗೆ, ಪಕ್ಷದಿಂದ ಫಂಡ್ ಕೂಡ ಬಂದಿಲ್ಲ, ಅಭ್ಯರ್ಥಿಗಳು ಸ್ವತಃ ಖರ್ಚಿನಿಂದಲೇ ಚುನಾವಣೆ ಎದುರಿಸಬೇಕು ಎಂದು ಒಡಿಸ್ಸಾ ಕಾಂಗ್ರೆಸ್ ಸೂಚಿಸಿದೆ.
ಕೇಂದ್ರ ಸರಕಾರ ಕಾಂಗ್ರೆಸ್ ಪಕ್ಷಕ್ಕೆ ಸಂಬAಧಿಸಿದ ಕೆಲವು ಬ್ಯಾಂಕ್ ಖಾತೆಗಳನ್ನು ಐಟಿ ಮೂಲಕ ಜಪ್ತಿ ಮಾಡಿಕೊಂಡಿದೆ ಎಂದು ಆರೋಪ ಮಾಡಿತ್ತು. ಇದೀಗ ಕಾಂಗ್ರೆಸ್ ಅಭ್ಯರ್ಥಿಗಳು ಪಕ್ಷ ಫಂಡ್ ನೀಡಿಲ್ಲ ಎಂಬ ಕಾರಣ ನೀಡಿ ಚುನಾವಣೆ ಕಣದಿಂದ ಹಿಂದೆ ಸರಿಯುತ್ತಿದ್ದಾರೆ. ಇದೀಗ ಮೋಹಂತಿ ಅವರ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯ ಹುಟುಕಾಟಕ್ಕೆ ಕಾಂಗ್ರೆಸ್ ಮುಂದಾಗಿದೆ. ಅದ್ಯಾವ ದುಡ್ಡಿರುವ ದೊಡ್ಡಕುಳ ಸಿಗ್ತಾನೋ ಕಾದು ನೋಡಬೇಕಿದೆ.