ಅಂಕಣ ರಾಜಕೀಯ ಸುದ್ದಿ

ಜೈಲಿಗೋಗೋ ಟೈಮ್‌ನಲ್ಲೂ ಜ್ಯೋತಿಷ್ಯ ಬಿಡ್ಲಿಲ್ಲ ರೇವಣ್ಣ

Share It

‘ಜಾತಿಗೆಟ್ಟರು ಸುಖ ಪಡಬೇಕು’ ಅಂತ ಗಾದೆ ಮಾತಿದೆ. ಆದು ಯಾವ ಅರ್ಥದ ಸುಖ ಎನ್ನುವುದು ಆಯಾಯ ಕಾಲಘಟ್ಟಕ್ಕೆ ಸೀಮಿತ. ಆದರೆ, ಈ ಮಾತು ಇಲ್ಲೇಕೆ ಬಂದಿದ್ದು ಎಂದರೆ, ಮಾಜಿ ಸಚಿವ ರೇವಣ್ಣ ಅವರು ಅರೆಸ್ಟ್ ಆಗುವಾಗಲೂ ‘ಗಳಿಗೆ’ ನೋಡಿ ಹೋದರಂತೆ !

“ಗುಳಿಗೆ ಸಿದ್ಧ ಒಳಗೆ ಮೆದ್ದ” ಅನ್ಮೋ ಗಾದೆ ಮಾತು ಕೇಳಿದ್ವಿ, ಅದೇ ಬೇರೆ ಗಾದೆ ಬಿಡಿ, ಆದರೆ, ಇದು ಗೌಡ್ರು ಮನೆಯ ‘ಗಳಿಗೆ’ ವಿಷಯ. ಸದ್ಯ ‘ಗುಳಿಗೆ’ ವಿಷಯ ಇನ್ನೂ ಎಲ್ಲೂ ಲೀಕ್ ಆಗಿಲ್ಲ. ‘ಗುಳಿಗೆ’ ಮ್ಯಾಟ್ರು ಗಳಿಗೆಯಲ್ಲಿ ಮುಗಿಯೋದಲ್ಲ ಬಿಡಿ, ದೇವೇಗೌಡರ ಫ್ಯಾಮಿಲಿ, ಅದರಲ್ಲೂ ರೇವಣ್ಣ ಯಾವುದೇ ಒಳ್ಳೆಯ ಕೆಲಸ ಮಾಡಬೇಕಾದರೆ, (ಕೆಟ್ಟ ಕೆಲಸ ಮಾಡುವಾಗ ಗೊತ್ತಿಲ್ಲ) ಜ್ಯೋತಿಷ್ಯ ನೋಡಿಯೇ ಕೈ ಹಾಕೋದು. ಮನೆಯಿಂದ ಹೊರಡುವಾಗಲೂ ಕಾಲ, ಗಳಿಗೆ ನೋಡಿಯೇ ಕಾಲಿಡೋದು.

ಇಷ್ಟೆಲ್ಲ ಕಟ್ಟುಪಾಡು ಹಾಕಿಕೊಂಡಿದ್ದರೂ, ರೇವಣ್ಣ ಕುಟುಂಬಕ್ಕೆ ಕೆಟ್ಟ ಕಾಲ ಬಂದೇಬಿಟ್ಟಿದೆ. ಹೊಟ್ಟೆಪಾಡು ಮಾಡಲು ಬಂದವರನ್ನು ಬಿಟ್ಟಿಲ್ಲ ಎನ್ನುತ್ತಿದ್ದಾರೆ ದೂರು ಕೊಟ್ಟವರು. ಸದಾ ಜ್ಯೋತಿಷ್ಯದ ಧ್ಯಾನ ಮಾಡುವ ಅವರ ಪಾಲಿಗೆ ಹೆಣ್ಣಿನ ರೂಪದಲ್ಲಿ ಕಂಟಕ ಎದುರಾಗಿವೆ. ಅದು ಮಗ ಎಂಬ ಶನಿ ರೂಪದಲ್ಲಿ ಹೆಗಲೇರಿತು ಎನ್ನುತ್ತಾರೆ. ಆದರೆ, ಇದೆಲ್ಲ ಗೊತ್ತಿರುವ ಕೆಲವರು, ಮಗನದಿರಿ ಇವರದ್ದೇ ಸ್ವಯಂಕೃತ ಸಾಧನೆ ಸಾಕಷ್ಟಿವೆ ಎನ್ನುತ್ತಾರೆ.

ಈಗಾಗ್ಲೇ ರೇವಣ್ಣ ಮತ್ತು ಮಗನ ಮೇಲೆ ಮೂರು ಎಫ್ ಐಆರ್ ಆಗಿವೆ. ಮೂರು ನೂರಾಗಬಹುದು ಅನ್ನೋದು ಎದುರು ಪಾರ್ಟಿಯೋರ ಆರೋಪ. ಊರು ಬಿಟ್ಟರೂ, ಪಾರಾಗಲು ಸಾಧ್ಯವಿಲ್ಲ ಅನ್ನೋದು ಪ್ರಜ್ವಲ್ ರೇವಣ್ಣಗೆ ಗೊತ್ತಾಗಬೇಕಿದೆ. ನನ್ನದು ಓಕೆ, ಮಗನನ್ನಾದರೂ ಆರೆಸ್ಟ್ ಮಾಡದಂತೆ ಮಾಡಿ ಅಂತ ಮಾಡಿಕೊಂಡ ರಿಕ್ವೆಸ್ಟ್, ಅಷ್ಟೊಂದು ಸಕ್ಸಸ್ ಆಗಿಲ್ಲ ಅನ್ನೋದು ರೇವಣ್ಣ ಮನದಾಳ.

ತೋಟದ ಮನೆ ಕಾಟ, ಹೇಮಾವತಿ ನದಿ ಹರಿಯುವ ನೋಟ, ಇದೆಲ್ಲದರ ನಡುವೆ ನಡೆದ ಕೀಟಲೆ ಕಿತಾಪತಿಗಳೆಲ್ಲ ಹೈ- ಫೋನ್ ಜೊತೆಗೆ ಹರಿದಾಡಿ, ಪೆನ್ ಡ್ರೈವ್ ರೂಪದಲ್ಲಿ ಹಂಚಿಕೆಯಾಗಿ ಪ್ರಜ್ವಲ್ ನನ್ನು ಪೆಂಗನನ್ನಾಗಿಸಿದೆ. ಇದೆಲ್ಲ ಮಾಟ, ಯಾವುದೋ ದುಷ್ಟ ಶಕ್ತಿಯ ಕಾಟ ಎಂದು ಜ್ಯೋತಿಷ್ಯ ಹೇಳೋರು ಒಂದಷ್ಟು ಕಾಸು ಮಾಡಿಕೊಂಡಿದ್ದಾರೆ. ಹೋಗ್ಲಿ ಉಳಿಯೋದಕ್ಕೆ ಏನಾದ್ರೂ ಪರಿಹಾರ ಮಾಡಿ, ಪರಿವಾರ ಸಮೇತ ಬಂದು ಪೂಜೆಗೆ ಕೂರ್ತೀವಿ ಅಂದ್ರಂತೆ ರೇವಣ್ಣ.

ಪೂಜೆ ಕತೆ ಆಮೇಲ್ ನೋಡೋಣ, “ಕಾಲಲಗ್ನ”ದಲ್ಲಿ ಪೊಲೀಸರ ಜತೆ ಕಾಲಾಕಬೇಡಿ, ಆಮೇಲ್ “ಲಾಭಲಗ್ನ” ಅನ್ನೋ ಒಂದು ಒಳ್ಳೆ ಲಗ್ನ ಇದೆ. ಅದರಲ್ಲಿ ಅವರ ಜತೆ ಹೋದ್ರೆ, ನಿಮಗೂ ಲಾಭ, ನಮಗಂತೂ ಭಾರಿ ಲಾಭ ! ನೀವು ಆದಷ್ಟು ಬೇಗ ವಾಪಸ್ ಬರ್ತೀರಾ, ಆಗ ಕೂತ್ಕೊಂಡು, ಹೋಮ, ಹವನ ಮಾಡಿ, ಅವನಿಗೂ ಏನೂ ಆಗದಂತೆ ಮಾಡೋಣ, ಮಾಡಿದ್ದೆಲ್ಲ ಸುಟ್ಟು ನೀರಿನಲ್ಲಿ ಹೋಮ ಮಾಡಿಬಿಡೋಣ ಎಂದು ಸಲಹೆ ನೀಡಿದ್ದಾರಂತೆ ಜೋತಿಷಿ.

ಜೈಲ್ ತಪ್ಪಿಸಿಕೊಳ್ಳೋಕೆ ಬೇಲ್ ಸಿಗಬಹುದು ಅಂತ ಕಾಯ್ತಾ ಇದ್ದು, ಸಿಗದಿದ್ದಕ್ಕೆ, ಸೀದಾ ದೊಡ್ಡೋರ ಕಾಲತ್ರ ಬಿದ್ದಾಗ ‘ಕಾಲಲಗ್ನ’ ಇತ್ತು. ಅದೇ ಕಾಲದಲ್ಲಿ ಪೊಲೀಸರು, ‘ಕಾಲಿಂಗ್ ಬೆಲ್’ ಹೊತ್ತಿದ್ರು. ಅದೆಷ್ಟ್ ದಿನ ನಮ್ ಮನೆ ಕಾಯ್ದಿಲ್ಲ, ಈಗಲೂ ಕಾಯ್ತಾರೆ ಬಿಡು ಅಂತ ಪೊಲೀಸರನ್ನ ಮನೆ ಬಾಗಿಲಲ್ಲೇ ಕಾಯಿಸಿ, “ಲಾಭಲಗ್ನ” ಬರ್ತಿದ್ದಂಗೆ ಬಂದು “ಲಾ” ಮುಂದೆ ಶರಣಾಗಿದ್ದಾರೆ ರೇವಣ್ಣ. ಮುಂದೆ ಏನೇನ್ ಆಗುತ್ತೋ ಆಗ್ಲಿ, ‘ಲಾ ಪಾಯಿಂಟ್’ ಹಾಕಿ ನಿಮ್ಮ ಪರ ನ್ಯಾಯ ಸಿಗುವಂತೆ ಮಾಡ್ತೀನಿ ಅಂತ ಹೇಳಿದರಂತೆ “ಲಾಯರ್”.

ಜೈಲಲ್ಲಿ ಜೋಪಾನವಾಗಿರಿ, ಜರ್ಮನಿಯಲ್ಲಿ ಇರೋರಿಗೂ ವಸಿ ಹೇಳಿ, ಮೈಮಾಟಕ್ಕೆ ಮರುಳಾಗಿ ಮಾಡಿ ಕೊಂಡಿರೋ ಕಾಟ, ಇದು ಯಾರೋ ಮಾಡಿಸಿರೋ ಮಾಟ, ಇದನ್ನೆಲ್ಲ ಕೋತಾ ಮಾಡೋವರೆಗೂ, ಕೂತಲ್ಲೇ‌ ಕೂತಿರಿ, ನಾನ್ ಗ್ರಹಗಳಿಗೆಲ್ಲ, ಹೇಳಿ ಗ್ರಹಗತಿ ಬದಲಾಯಿಸಿ, ಇದಕ್ಕೆಲ್ಲವೊಂದ್ ಗತಿ ಕಾಣಿಸಿ, ಗೆದ್ದು ಬರೋ ತರ ಮಾಡ್ತೀನಿ ಅಂತ ಮಾತ್ ಕೊಟ್ಟಿದ್ದಾರಂತೆ ಜ್ಯೋತಿಷಿ.

ಯಾವಾಗ್ಲೂ ನಂಬ್ತೀನಿ, ಈಗೇನ್ ಸ್ಪೆಷಲ್ಲೂ ಅಂತ ರೇವಣ್ಣ ಅವ್ರೇಳಿದಂಗೆ ಕೇಳಿದ್ದಾರೆ, ಆ ದೇವ್ರೇ ಕಾಪಾಡ್ಲಿ ಅಂತ “ಲಾಭಲಗ್ನ”ದಲ್ಲಿ ಪ್ರವೇಶ ಮಾಡಿದ್ದಾರೆ. ನೋಡಬೇಕು, ಜ್ಯೋತಿಷ್ಯ, ಕಾನೂನು, ಆರೋಪ, ತಂತ್ರ, ಕುತಂತ್ರ, ನೋವು, ಸಂಕಷ್ಟ ಇದ್ರಲ್ಲೆಲ್ಲ ಯಾವುದು ಗೆಲ್ಲುತ್ತೆ ಅಂತ. ಒಟ್ಟಾರೆ, “ಕಾನೂನು” ಸೋಲದಿದ್ರೆ ಅಷ್ಟೇ ಸಾಕು, ಅನ್ಯಾಯ ಆಗಿರುವವರಿಗೆ ನ್ಯಾಯ ಸಿಗಲಿ.


Share It

You cannot copy content of this page